ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸೆ. 3ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ:  ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ

ಬಳ್ಳಾರಿ ಆ, 12 : ಪದವಿ ಪಡೆಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿರಿತನ ಆಧಾರದ ಮೇಲೆ ಭಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ತಂದು ರಾಜ್ಯದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಸಿ ನಿಂಗಪ್ಪ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸಿದರು.                                              ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.                        ಈ ವಿಷಯವಾಗಿ ಮುಖ್ಯಮಂತ್ರಿಗಳು  ಸೆ.4, 2024 ರಂದು ಶಿಕ್ಷಣ ಸಚಿವರ ಜೊತೆ ಸಭೆ ನಡೆಸಿ  ಕೂಲಂಕುಶ ಪರಿಶೀಲನಗಾಗಿ ಸಮಿತಿ ಒಂದನ್ನು ರಚಿಸಿದರು. 30 ದಿನಗಳ ಒಳಗೆ ಸಮಿತಿಯಿಂದ ವರದಿಯನ್ನು ಪಡೆದು ಪ್ರಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಅವರು ತಮ್ಮ ಭರವಸೆಯನ್ನು ಈಡೇರಿಸಿರುವುದಿಲ್ಲ ಎಂದರು.

ಇದರಿಂದ ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.3 ರಂದು ರಾಜ್ಯದ ಎಲ್ಲಾ ಶಿಕ್ಷಕರು ಪ್ರತಿ ತಾಲೂಕಿನಲ್ಲಿ ಸಾಂದರ್ಭಿಕ ರಜೆಯನ್ನು ಹಾಕಿ ರಾಜ್ಯಮಟ್ಟದ ಬೃಹತ್ ಅಂತಿಮ ಹೋರಾಟ ಮಾಡಲು ಫ್ರೀಡಂ ಪಾರ್ಕ್ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಿಸಿದರು.                                                       ಈ ಸಂದರ್ಭದಲ್ಲಿ ಕೇವಲ ಆರರಿಂದ ಎಂಟನೇ ತರಗತಿಯವರೆಗೆ ಮಾತ್ರ ತರಗತಿಗಳನ್ನು ತೆಗೆದುಕೊಂಡು ಉಳಿದ ತರಗತಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.

ಸರ್ಕಾರ ನಮ್ಮ ಸಂಘದ  ಜತೆ ಮಾತನಾಡಿ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಸೆ. 4 ಮತ್ತು 5 ರಂದು ಅಹೋರಾತ್ರ ಧರಣಿಯನ್ನು ನಡೆಸಲಾಗುವುದು ಹಾಗೂ ಫ್ರೀಡಂ ಪಾರ್ಕ್ ನಲ್ಲಿಯೇ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ನಡೆಸಲಾಗುವುದು ಎಂದು ಹೇಳಿದರು.

ಈ ಹೋರಾಟದಲ್ಲಿ ರಾಜ್ಯದ ಜಿಲ್ಲಾ ತಾಲೂಕು ಪದಾಧಿಕಾರಿಗಳು ಎಲ್ಲಾ ಶಿಕ್ಷಕರು ಬೆಂಬಲ ನೀಡಲಿದ್ದಾರೆ ಎಂದು ಮಾಹಿತಿ‌ನೀಡಿದರು.
ಬೇಡಿಕೆಗಳು: 2017 ರವರೆಗೆ ನೇಮಕವಾದ ಶಿಕ್ಷಕರನ್ನು ಒಂದರಿಂದ ಏಳನೇ ತರಗತಿವರೆಗೆ ಶಿಕ್ಷಕರೆಂದು ಪರಿಗಣಿಸಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು 2017ರ ನಂತರ ನೇಮಕವಾದ ಶಿಕ್ಷಕರಿಗೂ ಅನ್ವಯಿಸಬೇಕು. ಹಾಗೂ ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕವಾದವರಿಗೆ ಪೂರ್ವನ್ವಯ  ಪದವೀಧರ ಶಿಕ್ಷಕರೆಂದು ಪದವಿಯನ್ನು ಪೂರೈಸಿದ ಎಲ್ಲರಿಗೂ ಸೇವಾ ಜ್ಯೇಷ್ಠತೆಯೊಂದಿಗೆ ಪದನಾಮಕರಿಸುವುದು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಬಡ್ತಿ ನೀಡಬೇಕು, ಅನ್ಯ ಕಾರ್ಯಗಳಿಗೆ ಶಿಕ್ಷಕರನ್ನು ನೇಮಿಸಬಾರದೆಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಂಡಪ್ಪನವರ ನಾಗರಾಜ, ಮುಖಂಡರಾದ ರಾಘವೇಂದ್ರ, ದೇವಣ್ಣ, ಎಚ್ ಬಸವರಾಜ್, ಶಿವಶಂಕರ್, ಎನ್ ಬಸವನಗೌಡ, ಪ್ರಕಾಶ್, ವೇದಾವತಿ ಸೇರಿದಂತೆ ಹಲವರು ಇದ್ದರು.