ಬೆಂಗಳೂರು, ಆ.12: ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು ಕೂಡಾ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ ಎಂದು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ಆಶ್ರಯದಲ್ಲಿ ನಡೆದ
ಪತ್ರಕರ್ತ ಭೀಮಣ್ಣ ಗಜಾಪುರ ಅವರು ರಚಿಸಿದ ‘ಕೂಡ್ಲಿಗಿ ವಿಸ್ಮಯ-ಅಭಿವೃದ್ಧಿ ಪತ್ರಿಕೋದ್ಯಮ” ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪರ್ತಕರ್ತರೂ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಇವತ್ತಿನ ಕಾಲಘಟ್ಟಕ್ಕೆ ತಮ್ಮ ಬುದ್ದಿಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ತಿಳಿಸಿದರು. ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಗ್ರಾಮೀಣ ಮಟ್ಟದ ಪತ್ರಕರ್ತರ ಸಾಮಥ್ಯ೯ವನ್ನು ಗುರುತಿಸಿ ಮುನ್ನೆಲೆಗೆ ತರುತ್ತಿರುವ ನಿಟ್ಟಿನಲ್ಲಿ ತಗಡೂರು ಅವರ ನೇತೃತ್ವದ ಕೆ.ಯೂ.ಡಬ್ಲ್ಯೂ.ಜೆ ತಂಡ ಮಾಡುತ್ತಿರುವ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ
ಶಿವಾನಂದ ತಗಡೂರು, ಗ್ರಾಮೀಣ ಸಮಸ್ಯೆಗಳಿಗೆ ಕನ್ನಡಿಯಂತಿರುವ ವಿಶೇಷ ವರದಿಗಾರಿಕೆ ಕೂಡಾ ಇಂದು ಪತ್ರಿಕೋದ್ಯಮಕ್ಕೆ ಅತ್ಯಗತ್ಯ ಎಂದರು. ಸುದ್ದಿಯ ವಿವಿಧ ಆಯಾಮಗಳನ್ನು ಕಂಡುಕೊಳ್ಳುವಲ್ಲಿ ಭೀಮಣ್ಣ ಗಜಾಪುರ ಅವರು ನಿಜಕ್ಕೂ ನಿಷ್ಣಾತರು ಎಂಬುದನ್ನು ಅವರ ಈ ಕೃತಿ ತಿಳಿಸಿಕೊಡುತ್ತದೆ ಶ್ಲಾಘಿಸಿದರು.
ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಲ್ಲಿ ವಿಷಯಗಳಿಗೆ ಪೂರಕವಾಗಿ ಅಧ್ಯಯನಶೀಲತೆ ಹೆಚ್ಚಾದ್ದಲ್ಲಿ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕೆಯೂಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮಾತನಾಡಿ, ಪತ್ರಕರ್ತ ಭೀಮಣ್ಣ ಗಜಾಪುರ ಸ್ವಸಾಮಥ್ಯ೯ದಿಂದ ವೃತ್ತಿಯಲ್ಲಿ ಗುರುತಿಸಿಕೊಂಡವರು ಎಂದರು.
ಕೃತಿಯ ಕರ್ತೃ ಭೀಮಣ್ಣ ಗಜಾಪುರ ಮಾತನಾಡಿ,
ತಾನು ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಸಮಾಜದ ವ್ಯವಸ್ಥೆಗೆ ಪೂರಕವಾಗಿರುವ ಪತ್ರಿಕೋದ್ಯಮ ವೃತ್ತಿ ಆಯ್ಕೆ ಮಾಡಿಕೊಂಡಿರುವ ಕಾರಣ ಬಹಳಷ್ಟು ಅನುಭವ ಪಾಠವನ್ನು ಕಲಿಯುವಂತಾದೆ ಎಂದರು.
ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ಕಾರ್ಯದರ್ಶಿ ಮತ್ತೀಕೆರೆ ಜಯರಾಮ,, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿದ್ದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ
ಎಸ್. ಸೋಮಶೇಖರ ಗಾಂಧಿ, ಆರ್. ದೇವರಾಜ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ
ಕೆ. ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷರಾದ ಎನ್. ಶ್ರೀನಾಥ್, ಕೆ.ಎಂ. ಜಿಕ್ರಿಯಾ, ಕಾರ್ಯದರ್ಶಿ ಬಸವರಾಜು, ಸಮಿತಿ ಸದಸ್ಯ ಎ.ಬಿ. ಶಿವರಾಜು ಸೇರಿದಂತೆ ಹಲವು ಸದಸ್ಯರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್ ಮತ್ತು ಕೂಡ್ಲಿಗಿ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು ಸ್ವಾಗತಿಸಿದರು. ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ಪತ್ರಕರ್ತ ಕೂಡ್ಲಿಗಿಯ ಹುಡೇಂ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಅಗಲಿದ ಪತ್ರಕರ್ತರಿಗೆ ಶ್ರದ್ದಾಂಜಲಿ: ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಮೈಸೂರುಮಿತ್ರ ಸಂಪಾದಕ ಗಣಪತಿ, ಅರಸೀಕೆರೆಯ ಕನ್ನಡಪ್ರಭ ವರದಿಗಾರ ಶಾಂತಕುಮಾರ್ ಸೇರಿದಂತೆ ಹಲವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.