ಭಾರತ ಸ್ವಾತಂತ್ರ್ಯ
ಫಿರಂಗಿ ಗುಂಡಿನ ಗುಡುಗಲ್ಲ
ಖಡ್ಗದಿ ಚಿಮ್ಮಿದ ರಕ್ತವೃಷ್ಟಿಯಲ್ಲ
ಸತ್ಯಾಗ್ರಹದ ಶಾಂತಿ ಮಂತ್ರದಿ
ಪಲ್ಲವಿಸಿತೀ ಸ್ವಾತಂತ್ರ್ಯಪುಷ್ಪ
ಗಾಂಧಿಯ ಚರಕದಿ ಹೊಮ್ಮಿತು
ಒಗ್ಗಟ್ಟಿನ ಖಾದಿ
ಆಂಗ್ಲರ ದುರಾಡಳಿತದ ಅಂತ್ಯಕೆ
ಹಾಡಿತು ನಾಂದಿ
ಭಾರತೀಯರ ಸ್ವದೇಶಿ ಮಂತ್ರಕೆ
ಬಿರುಕಾಯಿತು ಆಂಗ್ಲರ ಕೋಟೆ
ಮ್ಯಾಂಚೆಸ್ಟರ್ ಕಾರಖಾನೆಗಳಿಗೆ
ಬಡಿಯಿತು ದಿವಾಳಿಯ ಚಾಟಿ
ಉಪ್ಪಿನ ಹೋರಾಟಕೆ ಬಂದಿತು
ಜನತೆ ದಂಡಿ ದಂಡಿ
ಭಾರತೀಯರ ಸತ್ಯಾಗ್ರಹಕೆ
ಬೆಪ್ಪಾದರು ಆಂಗ್ಲ ಮಂದಿ
ಛಲೇಜಾವ್ ದ್ವನಿ ಮಾರ್ಧನಿಸಿತು
ಹಿಮಾಲಯದಿಂ ಮಹಾಸಾಗರದಿ
ಕರನಿರಾಕರಣೆಗೆ ಕರಗಿತು ಆಂಗ್ಲರ
ಬಡಿವಾರದ ಬೆದರಿಕೆಯ ಬೆಟ್ಟ,
ತೂತು ಬಿದ್ದಿತು ದರ್ಪದ ದೋಣಿಗೆ
ಅಂಬಿಗ ಅಂಜಿದ ಹರತಾಳದ ಅಲೆಗೆ
ಸೂರ್ಯ ಮುಳಗದ ಸಾಮ್ರಾಜ್ಯ
ಮುಳುಗಿತು ಸ್ವಾತಂತ್ರ್ಯದ ಬಿರುಗಾಳಿಗೆ
ಶ್ರಾವಣದ ಮಾಹೆಗೆ ಸ್ವಾತಂತ್ರ್ಯದ ಹಸಿರು
ಅಸಮತೆಯ ತಮಕೆ ಶಾಂತಿಯ ಬೆಳಗು
ಕಂದಿ ಕುಂದಿದ ಮನಕೆ ಕರುಣೆಯ ಕೇಸರಿ
ಪ್ರಗತಿಯ ಪಥಕೆ ಆಶೋಕ ಚಕ್ರದ ನೀಲಿ
ಸದಾ ತಿರುಗುತಿರಲಿ ಪ್ರಗತಿಯ ಚಕ್ರ
ಶಾಂತಿಯ ನೂಲಲಿ ಸಮತೆಯ ಬಟ್ಟೆ
ಉಪ್ಪಿನ ಋಣಕೆ ಭಾರತ ಬಿಡುಗಡೆ
ಹೊರಳದಿರಲಿ ಮನ ಬಂಧನದೆಡೆ
-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ
—–