ಮೈಸೂರು, ಸೆ.24: ಕವಿತೆ ಯಾರನ್ನೂ ಹೇಳಿ ಕೇಳಿ ಹುಟ್ಟುವುದಿಲ್ಲ. ಅನುಭವಗಳ ಧಾರೆಗೆ ಪದ ಪುಂಜಗಳ ಮೆರಗು ನೀಡಿ ಸೃಷ್ಟಿಸುವುದೇ ಕವಿತೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮತ್ತು ಕವಿ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.
ಮೈಸೂರು ದಸರಾ ಪ್ರಯುಕ್ತ ಮಾನಸ ಗಂಗೋತ್ರಿಯಲ್ಲಿ ಆಯೋಜಿಸಿದ್ದ ಕವಿಗೋಷ್ಟಿ(ಪ್ರಚುರ ಕವಿಗೋಷ್ಟಿ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನದೊಳಗಿನ ಭಾವನೆಗಳಿಗೆ, ಕಲ್ಪೃನಾ ಲಹರಿಗೆ, ಭಾವನೆಗಳ ತುಡಿತಕ್ಕೆ ಅಕ್ಷರ ರೂಪ ನೀಡುವ ಕುಸರಿ ಕೆಲಸದಲ್ಲಿಯೇ ಕವಿತೆ ಅರಳುತ್ತದೆ ಎಂದು ತಿಳಿಸಿದರು.
ಮೈಸೂರು ಅಂದ ತಕ್ಷಣವೇ ನೆನಪಾಗುವುದು ದಿಬ್ಬಣ, ದಸರಾ ಮಹೋತ್ಸವ, ಚಾಮುಂಡಿ ಬೆಟ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸಿದ ಮಹಾರಾಜರು ನೆನಪಾಗುತ್ತದೆ. ತಂತ್ರಜ್ಞಾನದಿಂದ ಹಿಡಿದು ಜಗತ್ತಿನ ಉದ್ದಗಲಕ್ಕೂ ಮೈಸೂರು ನಗರಿ ತನ್ನ ಕಂಪನ್ನು ಪಸರಿಸಿದೆ. ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದವರೇ ಈ ನೆಲದಲ್ಲಿ ಇದ್ದವರೇ ಹೆಚ್ಚು ಎಂದು ಹೇಳಿದರು.
ದಸರೆಯ ಸಂದರ್ಭದಲ್ಲಿ ಧ್ವನಿ ಇಲ್ಲದವರನ್ನು, ಅಶಕ್ತ ಸಮುದಾಯ ಸೇರಿದಂತೆ ಎಲ್ಲ ವಿಭಾಗಗಳಿಂದ ಕವಿಗಳನ್ನು ಒಂದೆಡೆ ಸೇರಿಸಿರುವುದು ವಿಶೇಷ. ಎಲ್ಲರನ್ನೂ ವೇದಿಕೆಗೆ ತರುವ ಸಮಗ್ರ ಯೋಚನೆಯಿಂದ ಕವಿಗೋಷ್ಟಿಯನ್ನು ರೂಪಿಸಿರುವುದು ಅಭಿನಂದನೀಯ ಎಂದರು.
ಕವಿತೆ ಹುಟ್ಟುವುದೇ ವಿಭಿನ್ನ. ಅನುಭವದ ಸಾರದಿಂದ ಹುಟ್ಟಲಿದೆ. ಅನುಭವಗಳ ಧಾರೆಗೆ ಪದ ಪುಂಜಗಳ ಮೆರಗು ನೀಡಿ ಸೃಷ್ಟಿಯಾಗುವುದಾಗಿದೆ. ಮನದೊಳಗಿನ ಭಾವನೆಗಳಿಗೆ ರೂಪ ಕೊಡುವುದು ಎಷ್ಟು ಮುಖ್ಯವೋ, ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.
ಮನಸ್ಸಿನ ತುಡಿತಗಳು, ಬೇಗುದಿಗಳನ್ನು ಕೆರಳಿಸು ಮತ್ತು ಅರಳಿಸುವ ಸಾಲುಗಳಿದ್ದರೆ ಅದು ಕವಿತೆ. ಇತಿಹಾಸದ ಕಾಲಘಟ್ಟದಲ್ಲಿ ಹೋಗಿ ವಿಶ್ಲೇಷಣೆ ಮಾಡುವುದೇ ಕವಿತೆ. ಕಲ್ಪನಾ ಲಹರಿಯಲ್ಲಿ ವಿಹರಿಸುವುದು ಕವಿತೆ.ನೋವಿನ ಅಭಿವ್ಯಕ್ತದಲ್ಲಿ ಮೂಡಿಬರುವ ಸಾಲುಗಳು ಕವಿತೆಗಳಾಗುತ್ತವೆ ಎಂದು ಹೇಳಿದರು.
ಖ್ಯಾತ ಕವಿ ಹೆಚ್.ಎಸ್.ವೆಂಕಟೇಶ್‌ಮೂರ್ತಿ ಅವರು ಸಾವಿನ ಹತ್ತಿರದಲ್ಲಿದ್ದಾಗ ಅವರೇ ಬರೆದಿದ್ದ ಕವಿತೆಯನ್ನು ಹಾಡಿಸಿದ್ದರು. ಆ ಕ್ಷಣ ಆ ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಪ್ರತಿ ಕವಿಗಳಿಗೂ ತಾವೇ ಸೃಷ್ಟಿಸಿದ ಕವನದ ಸಾಲುಗಳನ್ನು ಗುನುಗುವುದು ಅಭಿಲಾಷೆ ಇದ್ದೇ ಇರುತ್ತದೆ ಎಂದರು.
ಕವಿಗಳ ಬರವಣಿಗೆಯಲ್ಲಿ ಹಮ್ಮು ಗಿಮ್ಮು ಇರಲ್ಲ. ನೋವಿಗೆ ಮುಲಾಮು ಆಗುವ, ಕಷ್ಟಕ್ಕೆ ಕಿವಿಯಾಗುವ, ಕಣ್ಣೀರಿಗೆ ದನಿಯಾಗುವ ಶಕ್ತಿ ಇದೆ. ಎಲ್ಲ ಎಲ್ಲೆಗಳನ್ನು ಮೀರಿ ಎಲ್ಲಾ ಲೋಕಕ್ಕೂ ಕವಿ ಸಂಚರಿಸುತ್ತಾನೆ. ಅದು ಕವಿತೆ ಮತ್ತು ಕವಿಗೆ ಇರುವ ಶಕ್ತಿ ತಿಳಿಸಿದರು.
ದಸರಾ ಕವಿಗೋಷ್ಠಿಗೆ ತುಂಬಾ ಜನ ಕವಿಗಳು ತಮ್ಮ ಕವನಗಳನ್ನು ಪ್ರಸ್ತುತ ಪರಿಸಲು ಬಂದಿದ್ದೀರಿ. ಎಲ್ಲರ ಹೃದಯಗಳಲ್ಲಿ ಕವಿತೆಗಳು ಇರುತ್ತವೆ. ಆದರೆ, ಅದಕ್ಕೆ ಸ್ವರೂಪ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿರಲಿ ಎಂದರು.
ಬಳಿಕ ಗಾಜಾ ಗಡಿಯಲ್ಲಿ ನಿಂತು ತಾವೇ ರಚಿಸಿದ ’ನೆತ್ತರು’ ಮತ್ತು ಬಾನು ಮುಷ್ತಾಕ್ ಬಗ್ಗೆ ಬರೆದಿರುವ ಕವನವನ್ನು ವಾಚಿಸಿದರು. ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದ 43 ಮಂದಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.
ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಲೋಲಾಕ್ಷಿ ಅವರು ಮಾತನಾಡಿ, ಈ ಬಾರಿ ವಿಭಿನ್ನ ನೆಲೆಯಿಂದ ಕವಿಗಳನ್ನು ಆಯ್ಕೆ ಮಾಡಿ ಕವಿಗೋಷ್ಠಿಯನ್ನು ಸಂಘಟಿಸಲಾಗಿದೆ ಎಂದು ಹೇಳಿದರು.
ಕವಯತ್ರಿ ಡಾ.ಸುಕನ್ಯ ಮಾರುತಿ ಅವರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ರಾಜೇಂದ್ರ ಪ್ರಸಾದ್, ದಸರಾ ಕವಿಗೋಷ್ಟಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಡಾ.ಮಹೇಶ್ ದಳಪತಿ, ಮರಿದೇವಯ್ಯ, ಉಪಸಮಿತಿ ಉಪ ವಿಶೇಷಾಧಿಕಾರಿ ಸೋಮಶೇಖರ್, ಕಾರ್ಯದರ್ಶಿಗಳಾದ ಚೇತನ್ ಬಾಬು, ರಾಘವೇಂದ್ರ ಮತ್ತಿತರರಿದ್ದರು.