ಶುಕ್ರವಾರ (ಅ.31) ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ, ಸಾಹಿತಿ, ಪತ್ರಕರ್ತ ಕೂಡ್ಲಿಗಿಯ ಶ್ರೀ ಸಿದ್ಧರಾಮ ಹಿರೇಮಠ ಅವರ ಕುರಿತು ನಿವೃತ್ತ ಡಿಡಿಪಿಐ ಮಹಿಮ ಅವರು ಹಿರೇಮಠ ರವರೊಂದಿಗಿನ ಸ್ನೇಹ, ವ್ಯಕ್ತಿತ್ವವನ್ನು ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದಲ್ಲಿದ್ದು ಸದಾ ಮಾರ್ಗದರ್ಶನ ಮಾಡುತ್ತಿರುವ ಶ್ರೀ ಸಿದ್ಧರಾಮ ಹಿರೇಮಠ ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ. (ಸಂಪಾದಕರು)

ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠ ಪಿಯು ಕಾಲೇಜ್ ನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಶುಕ್ರವಾರ (ಅ.31) ವಯೋನಿವೃತ್ತರಾದವರು,
ನಮ್ಮ ಹೆಮ್ಮೆಯ ಗುರುಗಳು,ಆತ್ಮೀಯರು, ಹೃದಯವಂತರಾದ ಶ್ರೀ ಸಿದ್ಧರಾಮ ಹಿರೇಮಠ ಅವರ ಹಾಗೂ ನನ್ನ ಮಧ್ಯೆ ಇರುವ ಅವಿನಾಭಾವ ಸಂಬಂಧಗಳು ಅವರ ನಿವೃತ್ತಿ ವಿಷಯ ತಿಳಿದಾಗ ಮತ್ತೆ ಗರಿಕೆದರಿದವು.
ನಾನು ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ಕಂಡ ,ಮೊದಲನೆಯ ಹಾಗೂ ಕಟ್ಟಕಡೆಯ ಭಾವನಾ ಜೀವಿ ಸಿದ್ಧರಾಮ ಹಿರೇಮಠರು.
ಸೂಕ್ಷ್ಮ ಸಂವೇದಿ,ಮಿತಭಾಷಿ,ಒಡಲ ತುಂಬ ಮಮತೆ,ನಿಷ್ಕಲ್ಮಶವಾಷ ನೋಟ,ಅಕಾರಣವಾದ ಪ್ರೀತಿ ಅವರಲ್ಲಿ ನಾನು ಕಂಡಿದ್ದೇನೆ..
ಇವರು ಕವಿ….. ಗಜಲ್ ಸಾಹಿತ್ಯದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯುವ,ವ್ಯಾಖ್ಯಾನಿಸುವ,ಗಜಲ್ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಪಾಂಡಿತ್ಯವನ್ನು ಸಿದ್ಧರಾಮ ಹಿರೇಮಠರು ಹೊಂದಿದ್ದಾರೆ.
ಮಾತುಗಳು ಅಷ್ಟು ಮೃದುವಾಗಿದ್ದರು, ಅವರು ಯಾರಿಗೂ ಸೊಪ್ಪು ಹಾಕಿದವರಲ್ಲ,ಕೈ ಕಟ್ಟಿ ನಿಂತವರಲ್ಲ..ಜೀ ಜೀ ಅಂದವರಲ್ಲ.ತಮಗೆ ಒಪ್ಪವಾಗದುದ್ದನ್ನು ಸಮಯ ಬಂದಾಗ ನೇರವಾಗಿ ಎರಡೇ ಎರಡು ಮಾತುಗಳಲ್ಲಿ ಕಟುವಾಗಿ ಹೇಳಬಲ್ಲ ಛಾತಿಯುಳ್ಳ ಹಿರೇಮಠರು ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗ ಸ್ಥಿತಿಗೇರಿದ್ದರೂ ,ಅವರ ಈ ನೇರ ನುಡಿಗಳಿಂದ ಸಾಹಿತ್ಯ ಕ್ಷೇತ್ರವನ್ನು ವಶಪಡಿಸಿಕೊಂಡ ರೀತಿಯಲ್ಲಿ ವರ್ತಿಸುವ ಕೆಲ ಸ್ವಘೋಷಿತ ಸಾಹಿತಿಗಳು ಅವರ ಬಗ್ಗೆ ಮೂಗು ಮುರಿದುಕೊಂಡ ಹಲವಾರು ಉದಾಹರಣೆಗಳಿವೆ.
ಅವರು ಪಿ.ಹೆಚ್ .ಡಿ ಗೆ ಎಲ್ಲಾ ತಯಾರಿ ಮಾಡಿಕೊಂಡಾಗ ಅವರ ಪಾಪಿ ಸಹೋದ್ಯೋಗಿಯೊಬ್ಬ ಅವರ ಆಸೆಗೆ ತಣ್ಣೀರೆಚಿದ್ದು ಸರ್ವವಿದಿತವಾದ ವಿಷಯ..
ಖಂಡಿತವಾದಿ ಲೋಕ ವಿರೋಧಿ ಎನ್ನುವ ಮಾತು ಹಿರೇಮಠರಿಗೆ ಅಕ್ಷರಶಃ
ಒಪ್ಪುತ್ತದೆ..ಇದ್ದದ್ದನ್ನು ಇದ್ದ ಹಾಗೆ ಹೇಳುವ ನಮ್ಮ ಗಜಲ್ ಕಿಂಗ್ ನನಗಂತೂ ಬಹಳ ಇಷ್ಟವಾಗುತ್ತಾರೆ..
ನಾನು ಅವರು ಸಾಕಷ್ಟು ಸಲ ಭೇಟಿಯಾದಾಗ ನಾವು ಮಾತನಾಡಿದ್ದು ಬಹಳ ಕಡಿಮೆ..ಎದುರು ಬದಿರಾಗಿ ಕುಳಿತಾಗ ,ಅಕ್ಕ ಪಕ್ಕದಲ್ಲಿ ಕುಳಿತಾಗ ನಾವಿಬ್ಬರೂ ಕಂಗಳ ಮೂಲಕ, ಮುಗುಳ್ನಗುವಿನ ಮೂಲಕ ಮಾತನಾಡಿದ್ದೇ ಹೆಚ್ಚು..
ಈ ಮಗುವಿನಂತಹ ಮನಸ್ಸಿನ ಮನುಷ್ಯನನ್ನು ಕೆಲವೇ ಕೆಲವು ಮನಸುಗಳ ಮಾತ್ರ ಅರ್ಥ ಮಾಡಿಕೊಂಡಿರಬಲ್ಲವು ಎನ್ನುವುದು ನನ್ನ ಅನಿಸಿಕೆ…

ಅವರು ತಮ್ಮ ತಂದೆಯವರನ್ನು ನೆನೆದಾಗ ಅವರ ಕಂಗಳು ಒದ್ದೆಯಾಗುತ್ತವೆ..ಅವರ ತಂದೆಯವರ ಕೊನೆಯ ದಿನ ನಡೆದ ಘಟನೆಯನ್ನು ನೆನೆದುಕೊಂಡಾಗ ಇಂದಿಗೂ ಅವರು ಮಗುವಿನಂತೆ ಅತ್ತುಬಿಡುತ್ತಾರೆ..ಅಪ್ಪನ ಮಮತೆ,ಅಪ್ಪನ ಪ್ರೀತಿಯನ್ನುಂಡು ಬೆಳೆದ ಈ ಸೂನು ಒಮ್ಮೆ ತಮ್ಮ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ರಾಯಚೂರಿಗೆ ಬಂದಿದ್ದರು.. ಅಂದ ಹಾಗೆ ಈ ಹುಲಿ ಜನಿಸಿದ್ದು ನನ್ನ ಹೆಮ್ಮೆಯ ರಾಯಚೂರಿನಲ್ಲಿಯೇ…. ರಾಯಚೂರಿನ ಪ್ರಖ್ಯಾತ ಕವಿ ಶ್ರೀ ವೀರ ಹನುಮಾನ್ ರವರನ್ನು ಭೇಟಿಯಾಗಲು ಹಮ್ ದರ್ದ್ ಶಾಲೆಯ ಕಡೆ ಹೊರಟೆವು..
ಹಮ್ ದರ್ದ್ ಶಾಲೆಗೆ ಹೋಗಿ ಅಲ್ಲಿದ್ದ ವೀರಹನುಮಾನ್ ರವರನ್ನು ಭೇಟಿಯಾದೆವು.ಭೇಟಿಯಾಗಿ ಹೊರಬಂದಾಗ ನನ್ನನ್ನುದ್ದೇಶಿಸಿ,”ಗುರುಗಳೇ,ನನ್ನ ದೊಡ್ಡಪ್ಪ ಶಾಂತರಸರು ಇದೇ ತರಗತಿ ಕೋಣೆಯಲ್ಲಿ ಪಾಠ ಮಾಡುತ್ತಿದ್ದರು” ಅಂದವರೇ ಆ ತರಗತಿ ಕೋಣೆಯ ಮುಂದೆ ನಿಂತುಕೊಂಡು ಇಲ್ಲದ ದೊಡ್ಡಪ್ಪನನ್ನು ಮನಸ್ಸಿನಲ್ಲಿ ಹುಡುಕಿಕೊಂಡು ಭಾವುಕರಾದರು. interval ನಲ್ಲಿ ಎದುರುಗಿದ್ದ ಶಾಲೆಯಿಂದ ನಾನು ಓಡೋಡಿ ದೊಡ್ಡಪ್ಪನ ಬಳಿ ಬರುತ್ತಿದ್ದೆ.ಅವರು ಪ್ರೀತಿಯಿಂದ ಕೆಲ ನಾಣ್ಯಗಳನ್ನು ಕೊಟ್ಟು ಐಸ್ ತಿನ್ನಬೇಡ ಎಂದು ಹೇಳುತ್ತಿದ್ದರು..ಹೊರಬಂದು ಅದೇ ಐಸ್ ತಿನ್ನುತ್ತಿದ್ದೆ ಅಂದರು.

ತಾವು ಓದುತ್ತಿದ್ದ ಹಮ್ ದರ್ದ್ ಪ್ರೌಢ ಶಾಲೆಯ ಗೇಟಿನ ಮುಂದೆ ನಿಂತು ಗೇಟಿನ ಮೂಲಕ ಇಣುಕಿ ತಮ್ಮ ಪೂರ್ವಾಶ್ರಮದ ವಿದ್ಯಾಲಯವನ್ನು ಕಣ್ತುಂಬಿಕೊಂಡರು..ಆ ಶಾಲೆಯ ಗೇಟ್ ಮುಂದೆಯೂ ನಾನು ಒಂದು ಫೋಟೋ ಕ್ಲಿಕ್ಕಿಸಿದೆ..ಅಂದುಭಾನುವಾರ ಶಾಲೆಗೆ ರಜೆ ಇತ್ತು.
ಈ ಎರಡು ದೃಶ್ಯಗಳನ್ನು ಕಣ್ಣಾರೆ ಕಂಡು ನನ್ನ ಕಂಗಳೂ ಸಹ ಹನಿಗೂಡಿದವು.ಕರುಳ ಸಂಬಂಧ ಅಂದರೆ ಇದೇ ಅಲ್ಲವೇ?
ಅವರು ಅವರ ತಂದೆ ತಾಯಿಯೊಡನೆ ವಾಸವಾಗಿದ್ದ ಬಾಲ್ಯದ ಮನೆ ಅಕಸ್ಮಾತ್ ನಮ್ಮ ಕಣ್ಣಿಗೆ ಬಿತ್ತು..
“ಇದೇ ಮನೆಯಲ್ಲಿ ನಾನು ಬೆಳೆದದ್ದು,ಇಲ್ಲಿಯೇ ಅಪ್ಪ…..” ಮಾತುಗಳು ಮೌನವಾದವು…
ರಾಯಚೂರಿನಲ್ಲಿ ಜನಿಸಿದ ಸಿದ್ಧರಾಮರು ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಿತ್ರರ ಸಹಕಾರದೊಂದಿಗೆ ರಾಯಚೂರಿನ ಕನ್ನಡ ಭವನದಲ್ಲಿ ತಮ್ಮ ಕವನ ಸಂಕಲನ ಲೋಕಾರ್ಪಣೆಗೊಳಿಸಿದರು..
ಆ ಸಮಾರಂಭದಲ್ಲಿ ಮಾತನಾಡುತ್ತಾ” ಬದುಕು ತೀರಾ ಅತ್ಯಲ್ಪ ,ನಮಗೆ ಬದುಕು ಅರ್ಥವಾಗುವಷ್ಟರಲ್ಲಿ ನಮ್ಮ ಬದುಕು ಮುಗಿಯುವ ಹಂತಕ್ಕೆ ಬಂದಿರುತ್ತದೆ” ಎಂದು ಅವರು ಹೇಳಿದ ಮಾತುಗಳು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ಉಳಿದಿವೆ..ಎಂತಹ ಮಾರ್ಮಿಕವಾದ ಮಾತಲ್ಲವೇ?
ಯಾವ ಪ್ರಚಾರವನ್ನು,ಹೊಗಳಿಕೆಯನ್ನು ಬಯಸದ ಅವರ ಮನಸ್ಸು ಅಂತಹದ್ದೇ ಮನಸ್ಥಿತಿ ಹೊಂದಿದವರನ್ನು ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ..
ನನ್ನ” ನಿರಾಕಾರಿ ” ಕಥಾ ಸಂಕಲನಕ್ಕೆ ಮುನ್ನುಡಿ ಬರೆದುಕೊಡಿ ಗುರುಗಳೇ ಅಂತ ವಿನಂತಿಸಿಕೊಂಡಾಗ ಅವರು ಬಹಳ ಅನಂದದಿಂದ ಪುಸ್ತಕಕ್ಕೆ ಮುನ್ನುಡಿ ಬರೆದುಕೊಟ್ಟರು.ಆ ಮುನ್ನುಡಿಯನ್ನು ಓದಿದ ಹಲವಾರು ಅಕ್ಷರ ಪ್ರೇಮಿಗಳು ಅವರು ಬರೆದ ಒಂದೊಂದು ಸಾಲನ್ನು ಸವಿದು ನನ್ನೊಡನೆ ಮಾತನಾಡಿದ್ದುಂಟು..
ನಾನು ಪ್ರೀತಿಯಿಂದ ಗಜಲ್ ಕಿಂಗ್ ಎಂದು ಕರೆಯುವ ನಮ್ಮ ಗಜಲ್ ದೊರೆಗಳು ನಾಳೆ ವಯೋನಿವೃತ್ತ ರಾಗಲಿದ್ದಾರೆ..ವಯಸ್ಸಾದುದು ಅವರಿಗಲ್ಲ ,ಅವರ ಜನ್ಮದಿನಾಂಕಕ್ಕೆ..
ಈ ಮೌನತಪಸ್ವಿಯ ವಿಶ್ರಾಂತ ಬದುಕು ಆನಂದಮಯವಾಗಿರಲಿ..ಅವರಿಗೆ ಸರ್ವಶಕ್ತನು ಆಯುರಾರೋಗ್ಯವನ್ನು ದಯಪಾಲಿಸಲಿ…
ಮಗುವಿನ ಮನದ ಸಿದ್ಧರಾಮರು ಸೊನ್ನಲಿಗೆಯ ಸಿದ್ಧರಾಮ ನಂತೆ ಘಟ್ಟಿಗರು..
ಸಾಹಿತ್ಯ ಕ್ಷೇತ್ರದಲ್ಲಿ ಅವರು ಇನ್ನೂ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ..
ನೆನಪಿರಲಿ,ಅವರೊಬ್ಬ ಅದ್ಭುತ ಛಾಯಾಗ್ರಾಹಕರು…!!
ಗುರುಗಳೇ ತಮಗೆ ಶುಭವಾಗಲಿ

ನಿಮ್ಮವನಾದ
-ಮಹಿಮ, ಬಳ್ಳಾರಿ
