ಅನುದಿನ‌ ಕವನ-೧೭೬೬, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಕನ್ನಡಾಂಬೆ ಇರಲೆಮಗೆ ತಾವು !

ಕನ್ನಡಾಂಬೆ ಇರಲೆಮಗೆ ತಾವು !

ಪೊಡಮಡುವೆ ತಾಯೆ ಕನ್ನಡಾಂಬೆ
ಎನ್ನಬ್ಬೆ ಬತ್ತದ ಆ ವಾತ್ಸಲ್ಯದೊರತೆಗೆ
ನಿನ್ನೆದೆ ತುಂಬಿ ಪುಟಿವ ಭಾವಝರಿಗೆ
ನಿನ್ನೊಡಲ ಮಡಿಲ ಅಮೂಲ್ಯ ಸಿರಿಗೆ
ನಿನ್ನ ಕಂಗಳಲಿ ಹೊಳೆವ ಕರುಣ ಧಾರೆಗೆ
ಪೊಡ ಮಡುವೆ ಎನ್ನ ಪೊರೆವ ಮಾತೆ

ನಿನ್ನಂಗಳ ತುಂಬ ಹರಿದಾಡಿ ನಾದ ಸೂಸಿ
ಕೃಷ್ಣೆ ತುಂಗೆ ಕಾವೇರಿ ಭದ್ರೆ ಮಲಪ್ರಭೆ
ಘಟಪ್ರಭೆ ನೇತ್ರಾವತಿ ಶರಾವತಿ ಶಿಂಷಾ
ಅದೆಷ್ಟು ಕವಲು ಅಂತವಿರದ ಆ ಹರಿವು
ಆಮೃತವನುಣಿಸಿ ವರದ ಹಸ್ತವನಿರಿಸಿ
ಅನವರತ ಕಾಯ್ವ ನನ್ನಮ್ಮ ನಮಿಪೆ ಮಾತೆ

ನಿನ್ನೆದೆಯ ಭಾವ ನಿನ್ನ ಮಕ್ಕಳೊಡಲ ಸೇರಿ
ಪುಟಿದೆದ್ದ ಭಾವಝರಿ ಇಷ್ಟೆತ್ತರಕೆ ಜಿಗಿದು
ಉದಿಸಿ ನಾಡ ಉದ್ದಗಲಕೂ ಗಾನಸುಧೆಯ
ರಸವಾಹಿನಿಯ ಪೊತ್ತ ಕವಿ ಪುಂಗವರು
ಕೊನಯಿಲ್ಲದ ಉದ್ದಾಮ ಸಾಹಿತ್ಯ ಪಂಡಿತರು

ನೀನುಣಿಸಿದ ಅಮೃತವ ನಾಡಿನುದ್ದ ಹರಿಸಿ
ನಿನ್ನ ಸಿರಿ ವೈಭವವ ಮೆರೆಸಿ ಮುಕುಟವಿರಿಸಿ
ಭವ್ಯತೆಯ ಮೆರೆಸಿದ ನಿನ್ನ ಆ ಮಕ್ಕಳು ಧನ್ಯರಮ್ಮಾ
ತನ್ನವರ ಪೊರೆದು ದಿವ್ಯ ಪರಂಪರೆಯ ಸಾರಿ
ಬೆಳೆಸಿ ರನ್ನ ಚಿನ್ನದ ಹೊಳೆಯ ಹರಿಸಿ ಈ ನಾಡ
ಕೀರುತಿ ದಶ ದಿಕ್ಕಲ್ಹಾರಿ ನಿನ್ನ ಕೃಪೆ ಬೆಳಗಿತು ತಾಯೆ

ಇನ್ನೆನು ಹೇಳಲಿ ಪೊಗಳಲಳವಲ್ಲ ನಿನ್ನ ವೈಭವ
ಮೆರೆದಿದೆ ಕಾಣು ಶೋಭಿಸುತ ನಾಡ ತುಂಬೆಲ್ಲಾ
ಹಸಿರು ಹಾಸಿ ಗಿರಿ ಶಿಖರ ನಿನ್ನ ಪತಾಕೆಯನ್ಹೊದ್ದು
ಬೇಡುವೆನು ಇರಲಿ ಕರುಣೆ ಅನುಗಾಲ ಮಕ್ಕಳನು
ಭೇದವಿರದೆ ನಿನ್ನೊಲವ ಬಂಧಿಸಲೊಂದೆ‌ ಬಂಧದಲ್ಲಿ
ಜನುಮ ಜನುಮಕೂ ನಿನ್ನೊಡಲಲಿರಲಿ ಎಮಗೆ ತಾವು
ಕನ್ನಡಾಂಬೆ ಇರಲೆಮಗೆ ತಾವು !!


-ಸರೋಜಿನಿ ಪಡಸಲಗಿ
ಬೆಂಗಳೂರು