ಅನುದಿನ ಕವನ-೧೯೧೦, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬದಲಾಗಿದ್ದೇನೆ….!

ಬದಲಾಗಿದ್ದೇನೆ….!

ನಿಜ ,
ನಾ ಮೊದಲಿನಂತಿಲ್ಲ
ಅಂದಿನ ನನಗಿಂತ
ಇಂದಿನ ನಾನು ಭಿನ್ನ

ಮಹತ್ವದ್ದೇನೋ ಆಗಿ
ಬದಲಾಗಿದ್ದೇನೆ ಎಂದಲ್ಲ
ಆದರೆ ನೂರಾರು ಸಣ್ಣ
ವಿಚಾರಗಳಿಂದ ಬದಲಾಗಿದ್ದೇನೆ

ನಾನು ಯೋಚಿಸುವ ರೀತಿ
ನಾನು ನಂಬುವ ವಿಷಯ
ನಾನು ಆರಿಸಿಕೊಳ್ಳುವ ಜನ
ನಾನು ಕಲಿತ ಪಾಠಗಳು

ಬೆಳವಣಿಗೆ ಶಬ್ದ ಮಾಡುವುದಿಲ್ಲ
ಬೀಜದೊಳಗಿನ ಸಸಿ
ಟಸಿಲೊಡೆದು ಬೆಳಕಿಗೆ
ಮುಖ ಮಾಡಿ ಭೂಮಿಗೆ
ಕಾಲೂರಿ ನಿಲ್ಲುವಂತೆ

ನಾನೂ ಬೆಳೆದಿದ್ದೇನೆ…
ವರ್ಷಗಳ ಹಿಂದೆ, ನಾ
ಕನವರಿಸಿದ ,ಕಾತರಿಸಿದ
ಕನಸುಕಂಡ
ಹೊಸ ಅಸ್ತಿತ್ವವಾಗಿ….


-ರೂಪ ಗುರುರಾಜ್, ಬೆಂಗಳೂರು

Leave a Reply

Your email address will not be published. Required fields are marked *