ಅನುದಿನ ಕವನ-೧೮೦೪, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಶೂನ್ಯಸಂಪಾದನೆ.!

“ಇದು ನೊಂದ ಜೀವಗಳ ವೇದನೆ ನಿವೇದನೆಗಳ ಅಂತರಂಗ ತಲ್ಲಣಗಳ ಆರ್ದ್ರ ಕವಿತೆ. ಕುಸಿದ ಆಂತರ್ಯದೊಳಗಿಣ ಸೂಕ್ಷ್ಮ ಸಂವೇದನೆಗಳ ಅಶ್ರುರಿಂಗಣಗಳ ಭಾವಗೀತೆ. ಇದು ನಮ್ಮ ನಿಮ್ಮದೇ ಬದುಕಿನ ಸಂಕಷ್ಟ ಘಟ್ಟಗಳ ಸ್ವಾನುಭವವೂ ಹೌದು. ಸುತ್ತ ಕಾಣುವ ಸೋತ ಬದುಕುಗಳ ಸತ್ಯಾನುಭವವೂ ಹೌದು. ಯುಗ ಯುಗದ ಜಗದ ಜೀವ-ಜೀವನಗಳ ಲೋಕಾನುಭವವೂ ಹೌದು. ಬಸವಳಿದು ಬೋರಿಡಿವ ಬಾಳುಗಳ ಶೂನ್ಯಸಂಪಾದನೆಯ ಆನುಭಾವವೂ ಹೌದು. ಏನಂತೀರಾ..?”                                                        -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಶೂನ್ಯಸಂಪಾದನೆ.!

ಎಷ್ಟೆಲ್ಲ ಭರವಸೆಯಿಟ್ಟರೂ
ಏನೆಲ್ಲ ನಂಬಿಕೆ ನೆಟ್ಟರೂ
ಹೇಗೆಲ್ಲ ಅಭಯ ಕೊಟ್ಟರೂ
ಕೆಲವೊಮ್ಮೆ ಮನದೊಳಗಣ
ನರಳಿಕೆ ನಿಲ್ಲುವುದೇ ಇಲ್ಲ.!
ಕನಲಿಕೆ ಕರಗುವುದೇ ಇಲ್ಲ.!

ಎಷ್ಟೆಷ್ಟೆಲ್ಲ ಸಂತೈಸಿದರೂ
ಏನೇನೆಲ್ಲ ರಮಿಸಿದರೂ
ಹೇಗೇಗೆಲ್ಲ ಲಾಲಿಸಿದರೂ
ಕೆಲವೊಮ್ಮೆ ಒಡಲೊಳಗಣ
ಬಿಕ್ಕಳಿಕೆ ನಿಲ್ಲುವುದೇ ಇಲ್ಲ.!
ಕನವರಿಕೆ ಕಳೆವುದೇ ಇಲ್ಲ.!

ಎಷ್ಟೆಲ್ಲ ಹಣತೆ ಹಚ್ಚಿದರೂ
ಏನೆಲ್ಲ ಜ್ಯೋತಿ ಬೆಳಗಿದರೂ
ಹೇಗೆಲ್ಲ ಬೆಳಕ ತುಂಬಿದರೂ
ಕೆಲವೊಮ್ಮೆ ಎದೆಯಂಗಳದ
ಕತ್ತಲೆ ನೀಗುವುದೇ ಇಲ್ಲ.!
ಅಂಧಕಾರ ಅಳಿವುದೇ ಇಲ್ಲ.!

ಹು ಎಲ್ಲವೂ ಸರಿಯಾಯ್ತು
ಎನ್ನುವಷ್ಟರಲ್ಲೇ ಮತ್ತೆ..
ನೋವಿನ ಆಕ್ರಂದನ.!
ಆಹಾ ಬೆಳಕು ಮೂಡಿತು
ಎನ್ನುವಷ್ಟರಲ್ಲೇ ಮತ್ತೆ..
ಕಾರ್ಗತ್ತಲೆಯ ಆಕ್ರಮಣ.!

ಎಲ್ಲೆಡೆ ಹತ್ತಿಸುತ್ತಿ ಕಡೆಗೆ
ಮೊದಲಿನಲ್ಲಿಗೇ ಬಂದು
ನಿಲ್ಲುವ ಯಾತನಾ ಲಹರಿ.!
ಅಗೆದು ಬಗೆದು ಕಡೆಗೆ
ಶೂನ್ಯಸಂಪಾದನೆಯ ಪರಿ.!
ಬತ್ತುವ ಜೀವಚೈತನ್ಯ ಝರಿ.!

-ಎ.ಎನ್.ರಮೇಶ್. ಗುಬ್ಬಿ