ಅನುದಿನ ಕವನ-೧೮೦೫, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಒಲೆ ಮೇಲೆ ಉಕ್ಕುತ್ತಿದ್ದ
ಅನ್ನದ ಪಾತ್ರೆಯ ಮೇಲಿನ ಪ್ಲೇಟ್ ಸರಿಸಿ
ಒಂದು ಅಗಳು ಕಚ್ಚಿ,
ಅನ್ನ ಬೆಂದಿದೆಯೋ ಇಲ್ಲವೋ
ನಿಕ್ಕಿ ಮಾಡಿಕೊಂಡು
ಪಾತ್ರೆ ಬಗ್ಗಿಸಿ
ಮೇಲಿನ ಗಂಜಿ ಬಸಿಯುತ್ತಿರುವಾಗ
ಅವಳು ಥಟ್ಟನೇ ಬಂದು
ಗಲ್ಲಕ್ಕೆ ಮುತ್ತು ಕೊಡುತ್ತಾಳೆ.

ಒಂದು ನಿಶಾಂತ ಸಂಜೆ
ಗ್ಲಾಸ್ ತುಂಬ ವೈನ್ ಸುರುವಿಕೊಂಡು
ಆರಾಂ ಖುರ್ಚಿಯ ಮೇಲೆ ಕಾಲು ಚಾಚಿಕೊಂಡು

“ ರಂಜಿಶ್ ಹೀ ಸಹಿ
ದಿಲ್ ಹಿ ದುಖಾನೇ ಕೇಲಿಯೆ ಆ,
ಆ ಫಿರ್ ಸೆ ಮುಝೆ
ಛೋಡ ಕೇ ಜಾನೆ ಕೇಲಿಯೆ ಆ “

ಹೆಡ್ ಫೋನ್ ನಲ್ಲಿ ಮೆಹದಿ ಯ
ಆತ್ಮದೊಂದಿಗೆ ಆಕೆ ಸಂಧಾನ ನಡೆಸುತ್ತಿರುವಾಗ,
ಅವನು, ಮಿಂಚಿನಂತೆ ಬಂದು
ಅವಳ ಎದೆಗೆ ಇರಿಯುತ್ತಾನೆ.

ಎರಡೂ ಸುಖದ ಸಾವುಗಳೇ,

ಪ್ರೀತಿ ಮತ್ತು ದ್ವೇಷ ಎರಡರಲ್ಲೂ
ಅನಿರೀಕ್ಷಿತತೆ ತಂದೊಡ್ಡುವ
ಅಮಾಯಕ ಬೆರಗು ಅನುಭವಿಸಲಿಕ್ಕಾದರೂ
ಒಮ್ಮೆ ಪ್ರೀತಿ ಮಾಡಬೇಕು,
ದ್ವೇಷದ ಜೊತೆ ಒಮ್ಮೆಯಾದರೂ
ಸಂಧಾನ ಮಾಡಬೇಕು.

ಹೀಗಲ್ಲದೆ ಬೇರೆ ಹೇಗೆ ಸಾಧ್ಯ
ಸಾಬೀತು ಮಾಡುವುದು
ಬದುಕಿನ ಮಾದಕತೆಯನ್ನ
ಸ್ಪಷ್ಟವಾಗಿ ?

🌿~ಚಿದಂಬರ ನರೇಂದ್ರ, ಬೆಂಗಳೂರು