ಅನುದಿನ ಕವನ-೧೮೫೪, ಕವಯತ್ರಿ: ಶಿಲ್ಪಾ ಚಿಂತಾಮಣಿ ಪತ್ತಾರ, ಸಿಂದಗಿ, ಕವನದ ಶೀರ್ಷಿಕೆ: ಸೂರಪ್ಪ

ಸೂರಪ್ಪ

ಮುಂಜಾನೆ ಆರಕ್ಕೆ|

ನಿನ್ನುದಯ ಹಸುಗೂಸಂತೆ|

ಹಕ್ಕಿಗಳು ಚಿಲಿಪಿಲಿಗುಟ್ಟಿ|

ನಿನ್ನ ಮುದ್ದಿಸುವಂತೆ| ಏಳೆಂಟಕ್ಕೆ|

ನೀ ಕುವರ, ಹಿತವಾಗಿ ಮೈ ಕಾಸಿ|

ಹೆತ್ತವರಿಗೆ ಹಿತ ತರುವ ತುಂಟಾಟದಂತೆ|

ಹತ್ತು ಹನ್ನೊಂದಕ್ಕೆ|

ನೀ ತರುಣ, ಬಿಸಿರಕ್ತದ ಹುರುಪಿನಲಿ|

ಮೀಸೆ ತಿರುವಿದಂತೆ|

ಹನ್ನೆರಡಕ್ಕೆ|

ಏರಿಬಿಡುವೆ ಹುಚ್ಚು ಉನ್ಮಾದದಂತೆ|

ಮಧ್ಯಾಹ್ನ ಮೂರರವರೆಗೆ|

ನೀ ನಡೆವೆ, ಸಂಸಾರ ಸಾಗರದಲಿ|

ಏರು ಗತಿಯಲಿ ದುಡಿವಂತೆ|

ನಾಲ್ಕರ ನಂತರ|

ನೆರೆಗೂದಲು ಸುಳಿದಂತೆಲ್ಲ ಸೌಮ್ಯವಾಗುವೆ| ಪ್ರೌಢಿಮೆಯಲಿ ಪಕ್ವವಾದಂತೆ|

ಇಳಿಸಂಜೆಯಾಗುತಲೆ|

ಬೆಳಕಿನಂಗಿಯ ಕಳೆದು ಮುಸುಕು ಧರಿಸಿ|

ನೇಪಥ್ಯಕ್ಕೆ ಸರಿದು ಹೋಗುವಂತೆ…|

ಇಂದಿನ ನಿನ್ನ ಈ ಜನುಮ ಕಳೆದು|

ನಾಳೆಗೆ ಹೊಸ ಜನುಮವ ತಳೆದು|

ಮತ್ತೆ ಮತ್ತೆ ಬರುವೆ ಜಗಕೆ|

ಹುಟ್ಟು ಸಾವಿನಾಟವ ಕಲಿಸಲು|

ಗುರುದೇವನಂತೆ|

-ಶಿಲ್ಪಾ ಚಿಂತಾಮಣಿ ಪತ್ತಾರ, ಸಿಂದಗಿ

ಚಿತ್ರಕೃಪೆ(ಸೂರಪ್ಪ): ಶಿವಶಂಕರ ಬಣಗಾರ, ಹೊಸಪೇಟೆ