
ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ
ಆಕಾಶದ ಅಗಲಕ್ಕೂ ನಿಂತ ಆಲವೇ //
ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತೆ
ನೀರಿನಾಚೆ ಮೋಡದಾಚೆ ಮೊಳಗಿದಂಥ ಘೋಷವೆ//
ಬಾಳಿನಲ್ಲಿ ಕಂಡು ಕೊಂಡೆ ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ ಮಹಾಮನೆಯ ಬಿರುಕನು//
ಜಾತಿಯನ್ನು ಹೂತು ಬಿಡಲು
ಲಕ್ಷ ಲಕ್ಷ ಜನರನು ಕಟ್ಟಿ
ಕ್ರಿಯಾ ರಂಗಕ್ಕಿಳಿಸಿ
ಸ್ವಾಭಿಮಾನ ಸಮುದ್ರ//
ಮಹಾರಾಷ್ಟ್ರದ ಮಣ್ಣಿನಲ್ಲಿ ಮೂಡಿಬಂದ ಗುಡುಗು ಸಿಡಿಲು
ಮಳೆಯನೇಕೆ ತಾರಲಿಲ್ಲ ಮಿಂಚು ಮಾಯೆ ಅಷ್ಟೆಯಾ//
ಆಭಿಮಾನದ ನೇಗಿಲಿಂದ ಬಂಜರು ನೆಲ ಉತ್ತವನೇ
ಪಾತಿ ಮಾಡಿ ನಾಟಿಹಾಕಿ ಬೆಳೆಯ ಕಾಣದೋದವನೇ//
ಕಪ್ಪುಕ್ಕಿನ ಕೋಳಗಳನು
ಕಡಿದು ಎಸೆದ ವಜ್ರವೇ
ಬೆಳಕಿನತ್ತ ಬಿಡದೆ ನಡೆದ
ಮಹಾ ಬೌದ್ಧ ಬಿಕ್ಕುವೇ//
ಮಲಗಿದವರ ಕೂರಿಸಿದೆ ನಿಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ//

-ಡಾ. ಸಿದ್ದಲಿಂಗಯ್ಯ
