ಕಾಲಕ್ಕೊಂದು
ಹೃದಯವಿರಬಹುದಾಗಿದ್ದರೆ,
ಹಿಡಿದಿಟ್ಟಿರುತ್ತಿತ್ತು ಅದು ನಮ್ಮನ್ನು ಒಟ್ಟಾಗಿ
ನಾವು ಬೇರೆ ಬೇರೆಯಾದ ರಾತ್ರಿಗಳಲ್ಲಿ.
ನಮ್ಮ ಒಡಕಿನ ಪಕ್ಕದಲ್ಲಿ ಕುಳಿತು
ಒಟ್ಟು ಮಾಡುತ್ತಿತ್ತು ಚೂರುಗಳನ್ನು ಅಕ್ಕರೆಯಿಂದ,
ಮತ್ತು ಕಾಯುತ್ತಿತ್ತು ನಮಗಾಗಿ
ನಮ್ಮ ಬದುಕು ಕೇವಲ ಉಸಿರಾಟವಲ್ಲ
ಎನ್ನುವುದನ್ನ ಖಾತ್ರಿ ಮಾಡಿಕೊಳ್ಳುವ ತನಕ.
ಬಗ್ಗಿ ಪಿಸುಗುಡುತ್ತಿತ್ತು ನಮ್ಮ ಕಿವಿಯಲ್ಲಿ……
“ಗೊತ್ತು ನನಗೆ
ನಿಮ್ಮ ಕೈಗಳು ಕಂಪಿಸುತ್ತಿರುವುದು,
ನಿಮ್ಮ ಕೈ ಹಿಡಿಯದ ಜಗತ್ತಿನ ಕೈಗಳನ್ನು
ಗಟ್ಟಿಯಾಗಿ ಎತ್ತಿ ಹಿಡಿಯಿರಿ
ಎನ್ನಲು ಸಂಕೋಚ ನನಗೆ”
ಆದರೆ
ಕಾಲಕ್ಕೆ ಇಲ್ಲ ಅಂಥ ಸುಕುಮಾರತೆ.
ಹಾಗಾಗಿ ಹೊತ್ತುಕೊಂಡೇ ತೆವಳುತ್ತಿದ್ದೇವೆ
ಗಾಯಗಳನ್ನ,
ಮಾಯುವುದ ಮರೆತು ಹೋಗಿರುವ
ಮಾಯೆಗಳನ್ನ.

-ಚಿದಂಬರ ನರೇಂದ್ರ, ಬೆಂಗಳೂರು
