ಗಜಲ್
ಭೂರಮೆ ಸೊಬಗಿಗೆ ಮಾಧವ ಸೋಲಲು ರಾಧೆಯು ಬಾಗಿದಳು
ಶರದ ವೇಗದಲಿ ಧಾವಿಸಿ ಸಿಗ್ಗಲಿ ಚೆಲುವನ ಕೂಗಿದಳು
ಕರಗಿ ಮುರಳಿಯ ನಾದಕೆ ಚಿತ್ತವು ಶಿರವ ತೂಗದಿಹುದೇ
ಭರದಿ ಒಲವ ಕಡಲಲಿ ತೇಲುತ ತರುಣಿಯು ಸಾಗಿದಳು
ಕರವ ಮುಗಿಯುತ ಭಕುತಿ ತೋರಲು ಮುರಾರಿ ಮಣಿದಿಹನು
ಕೊರಳ ವೈಜಯಂತಿ ಮಾಲೆಯ ಮಿರುಪಿಗೆ ರಮಣಿ ಮಾಗಿದಳು
ತರುವು ಮೊಗವತ್ತಿ ಗೋಪನ ಕಾಣಲು ಜಿಗಿಯುತ ನಲಿಯುತಿದೆ
ತರಣಿ ಕಾಂತಿಯಲಿ ಮಿಂದಿಹ ಮೋಹನನ ಸನಿಹದಿ ಬೀಗಿದಳು
ಧಾರಿಣಿ ಮಡಿಲಲಿ ಸುಗಂಧ ಸುಮಗಳು ನಸು ನಗೆ ಬೀರುತಿವೆ
ವಾರಿಜ ನಯನದಿ ಸುಪ್ರಭೆ ಮೂಡಲು ಸಂಭ್ರಮದಿ ಏಗಿದಳು

-ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು
