ಅನುದಿನ ಕವನ-೧೮೮೫, ಕವಿ:ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಕವಿಯ ಕಷ್ಟ

ಕವಿಯ ಕಷ್ಟ

ಕವಿತೆ ಮಾರಾಟದ ಸರಕಲ್ಲ
ಅದಕ್ಕಾವ ಮಾರುಕಟ್ಟೆಯೂ ಇಲ್ಲ
ಆದರೂ…
ಕವನ ಸಂಕಲನಗಳು
ಮಾರಾಟವಾಗುತ್ತವೆಯಲ್ಲ!

ಕಥೆ – ಕಾದಂಬರಿಗಳಿಗಿರುವ
ಬೆಲೆ-ನೆಲೆ, ಸ್ಥಾನಮಾನ, ಪ್ರಕಾಶಕರ ದಾಸೋಹ
ಪತ್ರಿಕೆಗಳ ಪ್ರೋತ್ಸಾಹ,
ಓದುಗ ಪ್ರಭುಗಳ ಸಮ್ಮಾ(ನ್ಮಾ)ನ
ಕವಿತೆಗಳಿಗಿಲ್ಲ
ಅಂತೆಯೇ ಕವಿಗಳಿಗೂ ಸಹ
ಆದರೂ
ಕವಿ ಮತ್ತು ಕವಿತೆಗಳ ಹುಟ್ಟಿಗೆ ಬರವಿಲ್ಲವಲ್ಲ!

ಚಿತ್ರ:ಜಬೀವುಲ್ಲಾ ಎಂ.ಅಸದ್

‘ಅವ ನೋಡಿ ಕವಿ ಹೋಗುತ್ತಿದ್ದಾನೆ’
ಎಂದು ಬೆರಳ ತೋರಿ ವ್ಯಂಗದಿ
ನಗುತ್ತಾರೆ ಕಿವಿಯಾಗದ ಈ ಜಗದ ಮಂದಿ
ದೂರದಿಂದಲೇ ಅವರ ಸಂತಸ ಕಂಡಂತೆ ಭ್ರಮಿಸಿ
ಮುಗುಳ್ನಕ್ಕು ಸಂಭ್ರಮಿಸುತ್ತಾನೆ ಕವಿ
ನಿಜವರಿಯದ ಮೂರ್ಖನಂತೆ ನಟಿಸಿ

ಕವಿತೆಗಳಿಂದ ಕವಿ
ಇಷ್ಟು ಕಾಲ ಗಳಿಸಿದ್ದಾದರೂ ಏನು
ಹಣ, ಒಣ ಪ್ರತಿಷ್ಠೆ
ಅದಾವುದೂ ಇಲ್ಲವೇ
ಹಾಗಾದರೆ ಮತ್ತೇನೂ
ನಿಜಕ್ಕೂ ವಿವರಿಸುವುದು ನಷ್ಟ
ಅರ್ಥವಾಗದು ಎಲ್ಲರಿಗೂ
ಕವಿಯ ಕಷ್ಟ!


-ಜಬೀವುಲ್ಲಾ ಎಂ. ಅಸದ್, ಹಿರಿಯೂರು

Leave a Reply

Your email address will not be published. Required fields are marked *