ಅನುದಿನ ಕವನ-೧೮೯೯, ಹಿರಿಯ ಕವಿ: ಗುಲ್ಜಾರ್, ಕನ್ನಡಕ್ಕೆ: ಚಿದಂಬರ ನರೇಂದ್ರ, ಬೆಂಗಳೂರು

ಕಂಡಿದ್ದೀಯ?
ಮುಟ್ಟಿ ನೋಡಿದ್ದೀಯಾ
ಒಮ್ಮೆಯಾದರೂ ಆತ್ಮವನ್ನ?

ನಿಗಿ ನಿಗಿಸುತ್ತಿರುವ
ದಟ್ಟ ಮಂಜಿನ ಬಿಳೀ ಚಾದರದೊಳಗೆ,
ಉಸಿರಾಡುತ್ತಿರುವ ಒಳದನಿಗೆ
ಒಮ್ಮೆಯಾದರೂ ಕಿವಿಗೊಟ್ಟಿದ್ದೀಯಾ?

ರಾತ್ರಿ ದೋಣಿಯಲ್ಲೊಮ್ಮೆ
ಸರೋವರದ ತೀರದಲ್ಲಿ ಡೇರೆ ಹಾಕಿದಾಗ,
ನೀರಿನ ಅಲೆಗಳ ನಡುವಿನ ಗುಸುಗುಸು,
ಬಿಕ್ಕುತ್ತಿರುವ ಗಾಳಿಯ ಒಳಗುದಿಯನ್ನು
ಎಂದಾದರೂ ಕೇಳಿಸಿಕೊಂಡಿದ್ದೀಯಾ?

ಹುಣ್ಣಿಮೆ ರಾತ್ರಿಯ ತಂಪಿಗೆ
ಒಮ್ಮೆ ಕೆಲವು ನೆರಳುಗಳು
ಚಂದ್ರನನ್ನು ಅಟ್ಟಿಸಿಕೊಂಡು ಬಂದಾಗ,
ಕಿನಾರೆಯ ಮೇಲಿನ ಇಗರ್ಜಿಯ ಗೋಡೆಗೆ
ಬೆನ್ನು ಹಚ್ಚಿ
ನಿನ್ನ ಗರ್ಭದೊಳಗಿನ ಮಿಸುಕಾಟವನ್ನು
ಅವಡುಗಚ್ಚಿ ಅನುಭವಿಸದ್ದೀಯಾ?

ಈ ದೇಹ ಎಷ್ಟು ಉರಿದರೂ
ಕೊನೆಗೆ ಉಳಿಯುವುದು ಬೂದಿಯೇ.
ಅತ್ಮವನ್ನೂಮ್ಮೆ ಬೆಂಕಿಯಲ್ಲಿಟ್ಟು ನೋಡು
ಹೇಗೆ ಬಂಗಾರವಾಗುತ್ತದೆ.

ಕಂಡಿದ್ದೀಯಾ ಆತ್ಮವನ್ನ?
ಒಮ್ಮೆಯಾದರೂ
ಮುಟ್ಟಿ ನೋಡಿದ್ದೀಯಾ?


~ಗುಲ್ಜಾರ್


ಕನ್ನಡಕ್ಕೆ: ಚಿದಂಬರ ನರೇಂದ್ರ, ಬೆಂಗಳೂರು

Leave a Reply

Your email address will not be published. Required fields are marked *