ಪ್ರೀತಿ
ಎಲ್ಲವನ್ನು ಮರೆಸುತ್ತದೆ
ನೋಟ
ಎಲ್ಲವನ್ನು ಜ್ಞಾಪಿಸುತ್ತದೆ…
ಎತ್ತ ಹೊರಳಿದರೂ ಕಣ್ಣು
ನಿನ್ನ ಹುಡುವುದೆ ಕಾಯಕ
ಮರೆವು
ನೋವು
ಒಂದೇ ಎರಡೆ ಛೇ…ತೂ…
ಎನಿಸುವಷ್ಟು ಕುದಿವ ಕೋಪ
ಒಬ್ಬಂಟಿ ಪದ್ಯಕ್ಕೆ ನೂರು ನೆಪ
ಏನು ಹೇಳಲಿ ಇನ್ನೂ
ನನ್ನ ನಿನ್ನ ನಡುವೆ ಇರುವ ಮುನಿಸಿನ ಬಗ್ಗೆ…
ಕಾದು ನಿಂತಾಗ
ಬಾಗಿಲ ಸದ್ದು ಕಿರ್ ಎಂದರೂ ಸಾಕು
ನೀನೆ ಬಂದೇ ಏನೋ ಅಂದುಕೊಂಡು
ನನಗೆ ನಾನೇ ಗೊಣಗಿಕೊಳ್ಳುವಾಗ
ಹಲ್ಲಿ ಸುಮ್ಮನೆ ಲೋಚಗುಟ್ಟಿದರೆ
ಶುಭ ಸೂಚನೆಗಿಂತ ಅಶುಭವೆ ಹೆಚ್ಚೆಂದು
ನನಗೆ ನಾನೇ ಬೈದುಕೊಳ್ಳುತ್ತೇನೆ
ರಾತ್ರಿಗೆ ಹಚ್ಚಿಟ್ಟ ಹಣತೆಗಳ ನಡುವೆ
ಇರುಳ ಬೇದಿಸಿ ನೀನೂ ಬರಬಹುದೆಂದು
ನಾನು ಈಗಲೂ ಕಾಯುತ್ತಿದ್ದೇನೆ….

-ಸಿದ್ದು ಜನ್ನೂರ್, ಚಾಮರಾಜನಗರ
—–
