ಗುರುವಾರ (ಜೂ.25)ವಿಧಿವಶರಾದ ಮರಿಯಮ್ಮನಹಳ್ಳಿಯ ಹಿರಿಯ ರಂಗ ಕಲಾವಿದೆ ಸಿ. ಗಂಗಮ್ಮ ಅವರ ರಂಗಭೂಮಿ ಪ್ರವೇಶ, ಅಭಿನಯ, ಬದುಕಿನ ಬಗ್ಗೆ ದಾಖಲಿಸುವ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ ರಂಗಕಲಾವಿದ ಸಿ.ಕೆ. ನಾಗರಾಜ್ ಅವರು! *****

ಕಲಾನಿಧಿ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ ಪುರಸ್ಕೃತೆ, ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಸಿ. ಗಂಗಮ್ಮ (ಇವರ ರಂಗಭೂಮಿಯ ಹೆಸರು ಶಶಿಕಲಾ.)
ಲೋಕಪ್ಪನ ಹೊಲದ ಸಿ. ತಿಂದಪ್ಪ ಮತ್ತು ರಾಚಮ್ಮ ದಂಪತಿಗಳಿಗೆ ಸಿ. ಗಂಗಮ್ಮ ಅವರು 1946 ರಲ್ಲಿ ಮೂರನೆಯ ಮಗಳಾಗಿ ನಾರಾಯಣದೇವರ ಕೆರೆ ಜನಿಸಿದರು. ನಾರಾಯಣದೇವರಕೆರೆ 73 ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಜಲಾಶಯದ ನೀರಿನಲ್ಲಿ ಮುಳುಗಡೆಯಾಗಿರುವ ಊರು. ನಾರಾಯಣದೇವರಕೆರೆ ಬಿಟ್ಟು ಮರಿಯಮ್ಮನಹಳ್ಳಿಗೆ ಬಂದು ನೆಲೆಸಿದ್ದರು. ಗಂಗಮ್ಮ ಹುಟ್ಟಿದ ಮೂರನೆಯ ವರ್ಷಕ್ಕೆ ಕಾರಣಾಂತರಗಳಿಂದ ಉಚ್ಚಂಗಿ ಎಲ್ಲಮ್ಮನ ದೀಕ್ಷೆ ಪಡೆದರು. ಇವರು ಮರಿಯಮ್ಮನಹಳ್ಳಿಯಲ್ಲಿ 5 ನೇ ತರಗತಿವರೆಗೆ ಓದಿ ಮುಂದೆ 6 ನೇ ತರಗತಿಯನ್ನು ತಾಯಿಯ ತವರೂರಾದ ಹಂಪಾಪಟ್ಟಣದ ಸಹಿಪ್ರಾ ಶಾಲೆಯಲ್ಲಿ ಮುಂದುವರೆಸುತ್ತಿದ್ದಾಗ, ಅವರ ವಿದ್ಯಾ ಗುರುಗಳಾದ ಚೋರನೂರು ವೀರಯ್ಯರವರ ಒತ್ತಾಯಕ್ಕೆ ಮಣಿದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸಂಘದ ಪೌರಾಣಿಕ ನಾಟಕವೊಂದರಲ್ಲಿ ಹಾಸ್ಯ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಪಾದಾರ್ಪಣೆ ಮಾಡಿದರು.
1970 ರ ದಶಕದಲ್ಲಿ ಮರಿಯಮ್ಮನಹಳ್ಳಿಯಲ್ಲಿ ಅನೇಕ ರಂಗಕಲಾವಿದರು ರಂಗಭೂಮಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಗಂಗಮ್ಮ ಅವರು ರಂಗಭೂಮಿಯಲ್ಲಿ ಏನಾದರೂ ಹೆಸರು ಸಂಪಾದಿಸಬೇಕು ಎಂಬ ಕನಸು ಕಟ್ಟಿಕೊಂಡು ಮರಿಯಮ್ಮನಹಳ್ಳಿ ಸೇರಿದಂತೆ ಬಳ್ಳಾರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅನೇಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡಿದ್ದರು.
ಗಂಗಮ್ಮ ಅವರು ರಂಗಭೂಮಿಯಲ್ಲಿ ಪಾತ್ರ ಮಾಡುವಾಗ ಕಡಿಮೆ ಹಣ ಸಂಭಾವಣೆ ನೀಡುತ್ತಿದ್ದರಿಂದ ಈ ಹಣ ಜೀವನ ಸಾಕಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಜೀವನೋಪಾಯಕ್ಕಾಗಿ ಬಟ್ಟೆಗಳನ್ನು ಹೊಲೆದು ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದರು.
ಗಂಗಮ್ಮ ಅವರಿಗೆ ಹಿರಿಯ ರಂಗಕಲಾವಿದೆ ಚಿದೋಡಿ ಲೀಲಾ ಅವರ ಕಂಪನಿಯಲ್ಲಿ ನಟಿಸಲು ಅವಕಾಶ ಕೂಡ ಸಿಕ್ಕಿತ್ತು. ಆದರೆ ಕೌಟುಂಬಿಕ ಕಾರಣಗಳಿಂದಾಗಿ ನಾಟಕ ಕಂಪನಿಗೆ ಹೋಗಲು ನಿರಾಕರಿಸಿದರು. ಬೇರೆ ಬೇರೆ ಊರಿನವರು ಕರೆ ಬಂದ ಕಡೆ ಹೋಗಿ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಸುಮಾರು ಎರಡುರೆ ದಶಕಗಳ ಕಾಲ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಅವುಗಳಲ್ಲಿ ಪ್ರಮುಖ ನಾಟಕಗಳು ಶ್ರೀ ರತ್ನ ದೇವದಾಸಿ, ಸತ್ಯ ಹರಿಶ್ಚಂದ್ರ, ತಾಯಿ ಕರಳು, ಬಾಲಚಂದ್ರ, ಬಡತನದ ಭೂತ, ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ರಕ್ತರಾತ್ರಿ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿಯನಿಸಿದ್ದರು.

ನಂತರದ ದಿನಗಳಲ್ಲಿ ರಂಗಭೂಮಿಯಲ್ಲಿ ನಟಿಸುವುದನ್ನೇ ಬಿಟ್ಟುಬಿಟ್ಟರು. ಜೀವನೋಪಾಯಕ್ಕಾಗಿ ಬಟ್ಟೆಗಳನ್ನು ಹೊಲೆದು ಬದುಕನ್ನು ಸಾಗಿಸುತ್ತಿದ್ದರು.
ಸಿ. ಗಂಗಮ್ಮ ಅವರು ಮೂರು ಜನ ಮಕ್ಕಳಿಗೆ ಜನ್ಮನೀಡಿದ್ದರು. ಬಡತನದಲ್ಲೂ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ರೂಪಿಸಿದ ಹಿನ್ನಲೆಯಲ್ಲಿ ಹಿರಿಯ ಮಗ ಸಿ. ವಿಶ್ವನಾಥ ಉತ್ತಮ ಛಾಯಾಗ್ರಹಕರಾಗಿ ಮತ್ತು ಉತ್ತಮ ರಂಗ ಕಲಾವಿದರಾಗಿ ಲಲಿತ ಕಲಾರಂಗದಲ್ಲಿ ಅನೇಕ ವರ್ಷಗಳ ಕಾಲ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಮಗಳು ಸಿ. ಉಮಾ ಅವರು ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕಿಯಾಗಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಮತ್ತೊಬ್ಬ ಸುರೇಶ್ ಎನ್ನುವ ಮಗ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಿರಿಯ ಸೊಸೆ ಬಸಮ್ಮ ಸಿ. ವಿಶ್ವನಾಥ್ ಅವರು ಮುಖ್ಯೋಪಾಧ್ಯಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಗಮ್ಮ ಅವರ ಮೂರು ಜನ ಮೊಮ್ಮಕ್ಕಳು ಇಂಜಿಯರಿಂಗ್ ಓದಿ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಸುಖಿ ಜೀವನ ಸಾಗಿಸುತ್ತಿದ್ದಾರೆ.
ಸಿ. ಗಂಗಮ್ಮ ಅವರ ರಂಗಸೇವೆಯನ್ನು ಪರಿಗಣಿಸಿ ಮರಿಯಮ್ಮನಹಳ್ಳಿಯ ಲಲಿತಕಲಾ ರಂಗ ‘ಕಲಾನಿಧಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಹೊಸಪೇಟೆಯ ಟಿ.ಬಿ. ಡ್ಯಾಂನ ಕನ್ನಡ ಕಲಾಸಂಘ ಕೂಡಾ ಕೈಲಾಸಂ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ ನೀಡಿ ಗಂಗಮ್ಮ ಅವರನ್ನು ಗೌರವಿಸಿರುವುದು ಗಮನಾರ್ಹ.

-ಸಿ. ಕೆ. ನಾಗರಾಜ್, ರಂಗ ಕಲಾವಿದರು, ಮರಿಯಮ್ಮನಹಳ್ಳಿ
