
ಬಳ್ಳಾರಿ: ನಾಟಕ ಮನುಷ್ಯನಲ್ಲಿ ಶಾಂತಿಯ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸೃಜನಶೀಲತೆಯನ್ನು ಬೆಳೆಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ ವಿ ನಾಗರಾಜ ಮೂರ್ತಿ ಅವರು ಹೇಳಿದರು.
ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 146ನೇ ಜಯಂತಿಯ ಅಂಗವಾಗಿ ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಆಯೋಜಿಸಿರುವ ಎರಡು ದಿನಗಳ ನಾಟಕೋತ್ಸವ ಹಾಗೂ ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಯ ಜೊತೆಗೆ ರಂಗಭೂಮಿಯನ್ನೂ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಬಳ್ಳಾರಿ ರಾಘವರು ಸಾಮಾಜಿಕ ಬದಲಾವಣೆಗೆ ಕಾರಣವಾಗುವ ನಾಟಕಗಳನ್ನು ರಚಿಸಿ, ಸಮಾಜವಾದಿ ಚಿಂತನೆಯ ಮೂಲಕ ರಂಗಭೂಮಿಯನ್ನು ಜನರಿಗೆ ಪರಿಚಯಿಸಿದರು” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕಲಾವಿದರ ಜಯಂತಿಯನ್ನು ನಿರಂತರವಾಗಿ ಆಚರಿಸುವ ಸಂಸ್ಥೆ ಎಂದರೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪ ಮಾತನಾಡಿ ಕನ್ನಡ ಮತ್ತು ತೆಲುಗು ರಂಗಭೂಮಿಯ ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ರಾಘವ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ನಮ್ಮ ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ ಎಂದರು. ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ರಂಗಭೂಮಿ ತರಬೇತಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ರಾಘವರ ಆಶಯವಾಗಿತ್ತು ಎಂದು ಹೇಳಿದರು.
2026ನೇ ಸಾಲಿನ ರಾಜ್ಯಮಟ್ಟದ ರಾಘವ ಪ್ರಶಸ್ತಿಯನ್ನು ಸ್ವೀಕರಿಸಿದ ಹೆಸರಾಂತ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಮಾತನಾಡಿ ಶೇಕ್ಸ್‌ಪಿಯರ್ ಅವರು ರಾಘವರಿಗಾಗಿ ನಾಟಕ ಬರೆದರೋ ಅಥವಾ ಶೇಕ್ಸ್‌ಪಿಯರ್ ಅವರ ಪಾತ್ರಗಳಿಗೆ ಜೀವ ತುಂಬಲು ರಾಘವರು ಜನಿಸಿದರೋ ಎನ್ನುವಷ್ಟು ಅದ್ಭುತ ಅಭಿನಯ ಸಾಮರ್ಥ್ಯ ರಾಘವರದ್ದಾಗಿತ್ತು ಎಂದು ಕೊಂಡಾಡಿದರು.

ವೇದಿಕೆಯಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೋಟೇಶ್ವರರಾವ್, ಉಪಾಧ್ಯಕ್ಷ ಹೆಚ್. ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ ಪಿ. ಧನಂಜಯ, ಜಂಟಿ ಕಾರ್ಯದರ್ಶಿ ಪಿ.ಎಂ. ನಟರಾಜ್ ಉಪಸ್ಥಿತರಿದ್ದರು.
ಬಳಿಕ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಲಾವಿದರಿಂದ ಝಕೀರ್ ನದಾಫ್ ಅವರ ರಚನೆ ಹಾಗೂ ನಿರ್ದೇಶನದ ‘ನೆಲ ಮುಗಿಲು’ ಕನ್ನಡ ನಾಟಕ ಆದ್ಭುತವಾಗಿ ಪ್ರದರ್ಶನಗೊಂಡಿತು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್. ಪ್ರಕಾಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಆಶಾ ಸುಮಂತ್ ಮತ್ತು ಚೆಲ್ಲೂರು ಲಕ್ಷ್ಮಿ ಸುಕುಮಾರ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಣಾಪುರ ರಮೇಶ್ ಗೌಡ ವಂದಿಸಿದರು. ವಿಷ್ಣು ಹಡಪದ ನಿರೂಪಿಸಿದರು.
*****
