ಅನುದಿನ ಕವನ-೧೯೭೮, ಚಿತ್ರ ಹಾಗೂ ಕವಿತೆ: ಜಬೀವುಲ್ಲಾ ಎಮ್. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಬದ್ಧನಾಗಿರು ಬದುಕಿಗೆ

ಬದ್ಧನಾಗಿರು ಬದುಕಿಗೆ

ಪಾಚಿಗಟ್ಟಿ ನಿಂತ ಹಸಿರು ನೀರಿನ ಮೇಲೆ
ಹಳದಿ ಬಿದಿರಿನ ಮೆಳೆಯ ನೆರಳು ಓಡಿ
ಮೋಡಿ ಎಂಬಂತೆ ಹರಿಯುತ್ತಿದೆ ಲೀಲೆ
ಕೊಳವಾಗಿ ಹೊಳೆಯುತ್ತಿದೆ
ಆಗಸದ ಕನ್ನಡಿ!

ಅದಾವುದೋ ದಿಕ್ಕಿನಿಂದ ಪುರ್ರನೆ ಹಾರಿ
ಬೆಳ್ಹಕ್ಕಿ ಬಳಗವೊಂದು ಏಕಾಏಕಿ
ಒಂದೇ ಸಮನೆ ನೀರಿಗಿಳಿದ ರಭಸಕೆ
ಹರಿವ ನೆರಳೆಲ್ಲ ಕದಡಿದ ಚಿತ್ರವಾಗಿ
ಕಣ್ಣಿನ ನೋಟದ ಸಮಕೆ

ಮೌನ ಸಂಗೀತ ಕರಗಿ
ನಿದಿರೆಯಲಿ ಹಸುಗೂಸು
ಹೊರಳಿ ನಕ್ಕಂತೆ ಕೇಳಿ
ಪ್ರೇಮದ ಮೋಡಿ

ಈ ಕ್ಷಣದ ಸೌಂದರ್ಯ
ಮತ್ತೊಂದು ಕ್ಷಣಕ್ಕಿಲ್ಲ, ಇಲ್ಲ
ಮುಂಜಾನೆ ಅರಳಿ ಸಂಜೆಗೆ
ಬಾಡುವ ಸುಮಕ್ಕಿಂತ
ಸ್ಪಷ್ಟ ಉದಾಹರಣೆ
ಇಹದ ಬದುಕಿನ ನಶ್ವರತೆಗೆ
ಲೋಕದಲ್ಲಿ ಮತ್ತೊಂದಿಲ್ಲ; ಬೇಕಿಲ್ಲ

ಸೊಗಸೆಲ್ಲಾ ಹೊಲಸಾಗುವುದು
Fair is foul, and foul is fair:
Hover through the fog and filthy air
(- William Shakespeare)
ಜನನವೆಂಬ ಕನಸು
ಮರಣವೆಂಬ ಎಚ್ಚರದಲ್ಲಿ
ಮುಗಿಯಬಹುದು

ಬದುಕೇ ಇಷ್ಟು!
ಬಾಳಿನ ಆ ರಸನಿಮಿಷವಷ್ಟೇ ಸತ್ಯ
ಮೊದಲು ಬರಸೆಳೆದು ತಬ್ಬಿ
ಸಾರ್ಥಕವಾಗಿ ಬದುಕಿ ಬಿಡು ಅದನು ನಿತ್ಯ

ಮಳೆ ಸುರಿದ ಮೇಲೆ ನೆಲದಾಳದಿಂದ
ಗರಿಮೊಳಕೆ ಮೂಡಿ ಬರುವಂತೆ
ಒಂದರ ಹಿಂದೆ ಮತ್ತೊಂದರಂತೆ
ಚಣಗಳು ಓಡಿ ಬಂದು
ಬದುಕಿನ ಖಾಲಿ ಬಟ್ಟಲನು ಸೇರುವವು
ಹನಿ-ಹನಿ ಸೇರಿ ಹಳ್ಳ ತುಂಬುವಂತೆ
ಸಿದ್ಧನಾಗಿರು ತುಂಬಿ ತುಳುಕಲು
ಬದ್ಧನಾಗಿರು ಬಾಳಿ ಬದುಕಲು

-ಜಬೀವುಲ್ಲಾ ಎಮ್. ಅಸದ್, ಹಿರಿಯೂರು

Leave a Reply

Your email address will not be published. Required fields are marked *