ಸಹಕಾರಿಗಳ ಸಹಕಾರವೇ ಸಹಕಾರ ಚಳವಳಿಯ ಯಶಸ್ವಿ : ಪಲ್ಲೇದ ಮೈತ್ರಿ


ಬಳ್ಳಾರಿ, ಸೆ. 20: ಸಹಕಾರಿಗಳ ಸಹಕಾರದಿಂದಲೇ ಸಹಕಾರ ಚಳವಳಿಯು ಯಶಸ್ವಿ ಆಗಿದೆ ಎಂದು ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ ಅಧ್ಯಕ್ಷರಾದ ಶ್ರೀಮತಿ ಪಲ್ಲೇದ ಮೈತ್ರಿ ಅವರು ತಿಳಿಸಿದರು.                                      ನಗರದ ರಾಘವ ಕಲಾಮಂದಿರದಲ್ಲಿ ಭಾನುವಾರ ನಡೆದ ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ 71ನೇ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಹಕಾರ ಪರಸ್ಪರ ಹೊಂದಾಣಿಕೆ, ಆಲೋಚನೆ ಮತ್ತು ಜೊತೆಗೂಡಿ ಕೆಲಸ ಮಾಡುವುದರಲ್ಲಿದೆ. ಪ್ರಸ್ತುತ ಸಹಕಾರ ಚಳವಳಿಯು ಮಾರುಕಟ್ಟೆಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶಿಸಿದ್ದು ತಳಮಟ್ಟದಲ್ಲಿ ವಿಸ್ತರಣೆಗೊಳ್ಳುತ್ತಲೇ ಇದೆ ಎಂದು ಹೇಳಿದರು.

ಬಳ್ಳಾರಿಯ ಜನತಾ ಬಜಾರ್ ನಲ್ಲೂ ದೈನಂದಿನ ವ್ಯಾಪಾರ – ವಹಿವಾಟವನ್ನು ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ನಿರ್ದೇಶಕರುಗಳು, ಅಧಿಕಾರಿ-ಸಿಬ್ಬಂದಿಗಳು ಮತ್ತು ಸರ್ವ ಸದಸ್ಯರ ಬೆಂಬಲವು ಶ್ಲಾಘನೀಯ. ಬಳ್ಳಾರಿಯ ಜನತಾ ಬಜಾರ್ ಭವಿಷ್ಯದಲ್ಲಿ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದುವ ವಿಶ್ವಾಸವಿದೆ ಎಂದರು.

ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್)ದ 71ನೇ ವಾರ್ಷಿಕ ಮಹಾಜನ ಸಭೆಯಲ್ಲಿ 2024-25ರ ಸಾಲಿನ ವಾರ್ಷಿಕ ಮಹಾಜನ ಸಭೆಯ ನಡಾವಳಿಗಳನ್ನು ಓದಿ ಅನುಮೋದನೆ ಪಡೆಯಲಾಯಿತು. 2025-26ರ ಸಾಲಿನ ಆಡಳಿತ ವರದಿಯನ್ನು, 2025 – 26ರ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮತ್ತು 2026 – 27ರ ಸಾಲಿಗಾಗಿ ಸಿದ್ದಪಡಿಸಿರುವ ಸಂಘದ ಕಾರ್ಯಚಟುವಟಿಕೆಗಳು, 2026-27ನೇ ಸಾಲಿನ ಮುಂಗಡಪತ್ರ ಮತ್ತು 2025-26ರ ಸಾಲಿನ ಹೆಚ್ಚುವರಿ ಖರ್ಚುಗಳನ್ನು ಮಂಡನೆ ಮಾಡಿ ಅನುಮೋದನೆಯನ್ನು ಪಡೆಯಲಾಯಿತು.

ನಿರ್ದೇಶಕರಾದ ವೆಂಕಟೇಶ ಹೆಗಡೆ ಅವರು ಸಂಘದ ಸ್ಥಾಪನೆ ಮತ್ತು ಬೆಳವಣಿಗೆ ಕುರಿತು ಮಾತನಾಡಿದರು.

ಮಾಜಿ ಅಧ್ಯಕ್ಷರಾದ ಜಿ. ನೀಲಕಂಠಪ್ಪ, ಕೆ.ಎಂ. ವೇಮಣ್ಣ, ಉಪಾಧ್ಯಕ್ಷರಾದ ಪಿ. ದಾನರೆಡ್ಡಿ, ನಿರ್ದೇಶಕರುಗಳಾದ ನಸೀಮಾ ಬೇಗಂ, ಎಸ್. ಮುಜಾಹಿದ್, ಅಲ್ಲೀಪುರದ ಕೆ. ವೆಂಕಟಸ್ವಾಮಿ,
ಸಿ. ಗುರುಪ್ರಸಾದರೆಡ್ಡಿ, ಕೆ. ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್ ಗೌಡ, ಪರಿಣಿತ ಸದಸ್ಯರಾದ ವೀರಶೇಖರರೆಡ್ಡಿ ಮತ್ತು ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಕೋರಿದ ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀರಾಮು ಅವರು ಸಂಘದ ನೋಟೀಸಿನ ಪ್ರಕಾರ ಸಭೆಯಲ್ಲಿ ವಿಷಯಗಳನ್ನು ಮಂಡಿಸಿದರು. ಸಂಧ್ಯಾ ಕೋಲಾಚಲಂ ಅವರು ಪ್ರಾರ್ಥಿಸಿದರು‌. ನಿರ್ದೇಶಕರಾದ ಕೆ.ಎಂ. ಕೇದಾರನಾಥ ಅವರು ವಂದಿಸಿದರು.

Leave a Reply

Your email address will not be published. Required fields are marked *