ಪ್ರೀತಿಯನ್ನು ಉಳಿಸಿಕೊಳ್ಳಲು
ಹೆಚ್ಚೇನು ಬೇಕಿತ್ತು ನಮಗೆ?
ಮನಸ್ಸಿನ ಮುಂದೆ ಎದುರಾದ
ಗೊಂದಲದೊಂದಿಗೆ ಮಾತಾಡಿ
ಮುನಿಸು ಮನ್ನಿಸಿಕೊಳ್ಳಬೇಕಿತ್ತೊಮ್ಮೆ
ಎದೆಯ ಗಾಯಕ್ಕೆ ಮಾತಿನ ಮೊನೆ
ಮೊನಚಿಂದ ತಿವಿದುಕೊಳ್ಳದೇ
ಹಗುರಾಗುವ ಹಾಡು ಹಾಡಬೇಕಿತ್ತೊಮ್ಮೆ
ಹುಸಿ ಮುನಿಸಿಗೆ ಕಣ್ಣಂಚು ತೇವಗೊಳ್ಳದಂತೆ
ಪ್ರತಿ ಉಸಿರು ನಮ್ಮಿಬ್ಬರ ಹೆಸರು ಹೇಳುತ್ತಿದ್ದಾಗ
ಪ್ರೀತಿಯ ಸಿಂಚನ ತುಂಬ ಬೇಕಿತ್ತೊಮ್ಮೆ
ಪ್ರೀತಿಯನ್ನು ಉಳಿಸಿಕೊಳ್ಳಲು
ಹೆಚ್ಚೇನು ಬೇಕಿತ್ತು ನಮಗೆ?
ಮಾತು ಮುಗಿದು ಮಾಗಿರುವಾಗ
ಮಾತಾಡಲು ಮಾತು ಉಳಿಸಿಕೊಳ್ಳಬೇಕಿತ್ತು
ಘಾಸಿಗೊಂಡ ಮನದ ಕಾರಣಗಳನ್ನು
ಮರೆತು ಬಿಡುಬೇಕಿತ್ತು..!!

-ಡಾ.ಮುಮ್ತಾಜ್ ಬೇಗಂ, ಗಂಗಾವತಿ
