ಭಾದ್ರಪದದ ಸುಫ್ರಭಾತ
ಗಣೇಶ ದುಬಾರಿಯಾಗಿಹನು
ಬಡಿವಾರದ ಬಜಾರಿನಲಿ
ಭಕ್ತಿಯ ದೀವಿಗೆ ಮಂಕಾಗಿದೆ
ಯುಕ್ತಿಯ ವಿದ್ಯುದಲಂಕಾರಕೆ
ಕ್ರೌರ್ಯ ಕೈಗಳು ಸಿಡಿಸುತಿವೆ
ಮನ ಮಾಲಿನ್ಯ ಪಠಾಕಿಗಳ
ವಿಶ್ವಾಸದ ಶ್ವಾಸ ಕೋಶದಲಿ
ಅನುಮಾನದ ಹಬೆ ತುಂಬಿ..
ಬೆನಕನ ತ್ರಿಶೂಲ ತಿವಿಯಲಿ
ಜಾತಿಯ ಜಠರಾಗ್ನಿಗೆ
ಲಂಭೋದರನ ಉರಗ ಕಚ್ಚಲಿ
ಅಸಹಿಷ್ಣತೆಯ ಅಂಗಾಂಗಕೆ..
ಬಾದ್ರಪದವು ಸುಪ್ರಭಾತವಾಗೆ
ಹರ್ಷದ ಅಂಗಳಕೆ ವರ್ಷಧಾರೆ
ಬಾಳೆಂಬ ರಸಬಳ್ಳಿ ಹಬ್ಬಿ,ಅದರಲಿ
ಸಹಿಷ್ಣುತೆ ಸುಮಗಳರಳಲಿ..
ಒಗ್ಗಟ್ಟಿನ ಹೋಳಿಗೆ ತುಪ್ಪಕೆ
ಕರಣೆ ಕೋಸಂಬರಿ ಬೆರೆಸಿ
ಸವಿಯೋಣ ಶಾಂತಿ ಸವಿಯ
ನೆಮ್ಮದಿಯ ನಾಳೆಗಳಿಗೆ..

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
