
ಬಳ್ಳಾರಿ: ಶಿಬಿರಾರ್ಥಿಗಳು ಶಿಸ್ತು, ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕರಾದ ಡಾ. ಗೋಪಾಲ್ ಎನ್. ಅವರು ಹೇಳಿದರು.
ಬಳ್ಳಾರಿಯ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ದಮ್ಮೂರು ಗ್ರಾಮದ ಶ್ರೀ ಸದ್ಗುರು ವೆಂಕಪ್ಪ ತಾತನ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ–2026ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೌರತ್ವ ಎಂಬುದು ಕೇವಲ ಹಕ್ಕುಗಳನ್ನು ಅನುಭವಿಸುವುದಕ್ಕೆ ಸೀಮಿತವಾಗಿರದೆ, ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸಮಯಪಾಲನೆ, ಸಹಕಾರ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳು ಯುವಜನರಲ್ಲಿ ರಾಷ್ಟ್ರಪ್ರೇಮ ಮತ್ತು ಉತ್ತಮ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ” ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರೊ. ಸುರೇಶ್ ಬಾಬು ಮಾತನಾಡಿ, ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ಭವಿಷ್ಯದ ಸಮಾಜ ನಿರ್ಮಾತೃಗಳು ಎಂದರು. ತರಗತಿಯಲ್ಲಿ ಬೋಧಿಸುವ ಜ್ಞಾನಕ್ಕಿಂತಲೂ ತಮ್ಮ ನಡವಳಿಕೆ, ಮೌಲ್ಯಗಳು ಮತ್ತು ಸಾಮಾಜಿಕ ಬದ್ಧತೆಯ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. ಪೌರತ್ವ ತರಬೇತಿ ಶಿಬಿರವು ಪ್ರಶಿಕ್ಷಣಾರ್ಥಿಗಳಲ್ಲಿ ನಾಯಕತ್ವ, ತಂಡದ ಕೆಲಸ, ಸೇವಾ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀ ತಾಜುದ್ದೀನ್ ಪಿ. ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯತೆ ಮತ್ತು ದೇಶದ ಸಂವಿಧಾನಾತ್ಮಕ ಮೌಲ್ಯಗಳ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯ ಎಂದು ಹೇಳಿದರು.
ಈ ಶಿಬಿರದ ಮೂಲಕ ಪ್ರಶಿಕ್ಷಣಾರ್ಥಿಗಳು ಪಡೆದ ಅನುಭವಗಳನ್ನು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಡಾ. ಗೋಪಾಲ್ ಎನ್. ಹಾಗೂ ಪ್ರೊ. ಸುರೇಶ್ ಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಆಡಳಿತ ಮಂಡಳಿಯವರು ಶಿಬಿರದ ಯಶಸ್ಸಿಗೆ ಶ್ರಮಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು. ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಬಿರದ ನಿರ್ದೇಶಕರಾದ ಡಾ. ಅಶ್ವ ರಾಮು ಅವರು ಮಾತನಾಡಿ, ಪೌರತ್ವ ತರಬೇತಿ ಶಿಬಿರವನ್ನು ಪ್ರಶಿಕ್ಷಣಾರ್ಥಿಗಳಲ್ಲಿ ಶಿಸ್ತು, ಸಹಕಾರ, ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳು, ಗಣ್ಯರು, ಸಂಸ್ಥೆಯ ಆಡಳಿತ ಮಂಡಳಿ, ಬೋಧಕ–ಬೋಧಕೇತರ ಸಿಬ್ಬಂದಿ, ಶಿಬಿರದ ಸಂಯೋಜಕರು ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದರು. ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಸಮಾಜದಲ್ಲಿ ಕಾರ್ಯರೂಪಕ್ಕೆ ತರುವ ಮೂಲಕ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವೀರಭದ್ರಪ್ಪ, ಸಹಾಯಕ ಪ್ರಾಧ್ಯಾಪಕ ಆಲಂ ಬಾಷಾ, ಕಾಲೇಜಿನ ಅಧ್ಯಕ್ಷರಾದ ಆಲ್ಮಸ್ ತಬಸ್ಸುಮ್, ಆಡಳಿತಾಧಿಕಾರಿ ಹಫೀಜಾ ಬೇಗಂ, ಹಣಕಾಸು ವಿಭಾಗದ ಉಮೇಮ ಜೈಬ್, ಶಿಬಿರದ ಸಂಯೋಜಕರಾದ ಆಂಥೋನಿ ಐ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕುಮಾರಿ ದೀಪಿಕಾ ಪ್ರಾರ್ಥಿಸಿದರು. ಶಿವಗಂಗಾ ಸ್ವಾಗತಿಸಿದರು. ಸೈಯದ್ ಹುಸೇನ್, ಭೀಮಪ್ಪ ಹಾಗೂ ಆಲಂ ಬಾಷಾ ನಿರ್ವಹಿಸಿದರು. ಅಭಿದ್ ಹುಸೇನ್ ನಿರೂಪಿಸಿದರು,
ಸಮಾರೋಪದ ಅಂಗವಾಗಿ ಶಿಬಿರಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಶಿಬಿರಾಗ್ನಿ ಕಾರ್ಯಕ್ರಮವು ಶಿಬಿರಾರ್ಥಿಗಳಲ್ಲಿ ಒಗ್ಗಟ್ಟು, ಸಹೋದರತ್ವ ಮತ್ತು ಸೇವಾ ಮನೋಭಾವವನ್ನು ಮೂಡಿಸುವ ರೀತಿಯಲ್ಲಿ ನಡೆಯಿತು. ಶಿಬಿರದ ನಿರ್ದೇಶಕರಾದ ಡಾ. ಅಶ್ವ ರಾಮು ಅವರು ಶಿಬಿರಾರ್ಥಿಗಳಿಗೆ ಪೌರತ್ವದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಮೂರು ದಿನಗಳ ಕಾಲ ನಡೆದ ಪೌರತ್ವ ತರಬೇತಿ ಶಿಬಿರವು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ, ಅನುಭವ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ಸ್ಮರಣೀಯವಾಗಿ ಸಮಾರೋಪಗೊಂಡಿತು.
