ಅಬಾಬಿ ಕಾವ್ಯ ರಚನೆ
(೧)
ಪ್ರೇಮವೆಂದರೆ
ನೀನಲ್ಲ
ನಾನೂ ಅಲ್ಲ
‘ಅಸದ್’
ನಂಬಿಕೆ ಎಂಬ ದೇವರು!
(೨)
ಹಿತವಲ್ಲದ
ಲೋಕದ ಮಾತು
ಕಿವಿ ತುಂಬುತ್ತಿದೆ
‘ಅಸದ್’
ಕಿವುಡನಾಗು!
(೩)
ಮನಸ್ಸು ಕಲ್ಮಶಗೊಂಡಿದೆ
ಕೆಟ್ಟ ಆಲೋಚನೆಗಳಿಗೆ
ಒಳಗಾಗಿ
‘ಅಸದ್’
ಒಗೆದು ಒಣಹಾಕು ಮೊದಲು!
(೪)
ನಿನ್ನ ನೀಲಿ ಕಣ್ಣಿನ ಕಡಲಿನಲಿ
ನನ್ನ ಹೃದಯದ ನಾವೆ
ಮುಳುಗುತ್ತಿದೆ
‘ಅಸದ್’
ಬದುಕನ್ನು ಕರುಣಿಸು!
(೫)
ನಶ್ವರದ ಜಗತ್ತು
ಬರೆದುಕೊ ಹೀಗೆ
ಹೃದಯದ ಮೇಲೊಂದು ವಾಕ್ಯ
‘ಅಸದ್’
ನಾನು ಆಶಾಶ್ವತ; ಎಂದು.
(೬)
ನೆಲದ ಹಸಿರು ಹಾಡು
ಮಳೆ ಹನಿಗಳ ಮಾತು
ಗಾಳಿಯ ಮೌನ
‘ಅಸದ್’
ಅನುಭವಿಸು.
(೭)
ಬೆಳಕಿನ ಹಕ್ಕಿಗೆ ನೂರು ಬಣ್ಣ
ಸಾವಿರ ಕಣ್ಣು
ಆದರೆ,
‘ಅಸದ್’
ಎಲ್ಲಾ ಕುರುಡು!
(೮)
ಕಷ್ಟಗಳು ಸುಡುವಂತೆ
ಮನುಷ್ಯನನ್ನು
ಬೆಂಕಿಯೂ ಸುಡಲಾಗದು
‘ಅಸದ್’
ಸುಟ್ಟು ಗಟ್ಟಿಯಾಗು!
(೯)
ಬಯಕೆಗಳೆಂದರೆ
ಚಿಟ್ಟೆಯ ರೆಕ್ಕೆಗಳು
ಎಲ್ಲಕ್ಕೂ ಚಂಚಲತೆಯೇ ಕಾರಣ
‘ಅಸದ್’
ನೀನೂ ಹಾರು!
(೧೦)
ಬದುಕುವುದೆಂದರೆ
ಉಸಿರಾಡುವುದಷ್ಟೇ ಅಲ್ಲ
ಉಂಡು ಓಡಾಡುವುದಲ್ಲ
‘ಅಸದ್’
ನೋವಿಗೆ ಸ್ಪಂದಿಸುವುದು!

◼️ ಜಬೀವುಲ್ಲಾ ಎಮ್. ಅಸದ್, ಹಿರಿಯೂರು
