ಮಧ್ಯ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯವಂತರಾಗಿರಿ : ಶ್ರೀ ಕಲ್ಯಾಣ ಸ್ವಾಮೀಜಿ

ಬಳ್ಳಾರಿ, ಅ.8: ಮದ್ಯ ಮತ್ತು ಇತರ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದರ ಜತೆಗೆ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳುಮಾಡುತ್ತವೆ. ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಹಾಗೂ ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಮ್ಮರಬೇಡ ಮಠದ ಶ್ರೀ ಕಲ್ಯಾಣ ಸ್ವಾಮೀಜಿ ತಿಳಿಸಿದರು.

ನಗರದ ರಾಘವ ಕಲಾ ಮಂದಿರದಲ್ಲಿ  ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಬಳ್ಳಾರಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ ಹಾಗೂ ವ್ಯಸನಮುಕ್ತರಿಗೆ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.                            ಮಹಾತ್ಮ ಗಾಂಧೀಜಿಯವರು ದುಶ್ಚಟಮುಕ್ತ ಹಾಗೂ ಸ್ವಾಸ್ಥ್ಯ ಸಮಾಜದ ಕನಸು ಕಂಡಿದ್ದರು. ಅವರ ಆದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.          ಮದ್ಯ, ತಂಬಾಕು ಹಾಗೂ ಮಾದಕ ವಸ್ತುಗಳಂತಹ ದುಶ್ಚಟಗಳು ವ್ಯಕ್ತಿಯ ಬದುಕನ್ನು ನಿಧಾನವಾಗಿ ನಾಶಪಡಿಸುವುದಲ್ಲದೆ, ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ  ಮಾತನಾಡಿದ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ರೋಹಿತಾಕ್ಷ,
ದುಶ್ಚಟಗಳಿಗೆ ಒಳಗಾದವರನ್ನು ಕೀಳಾಗಿ ಕಾಣದೆ, ಅವರನ್ನು ವ್ಯಸನದಿಂದ ಹೊರತರುವ ನಿಟ್ಟಿನಲ್ಲಿ ಕುಟುಂಬಸ್ಥರು ಹಾಗೂ ಸಮಾಜ ಸಹಾನುಭೂತಿಯಿಂದ ನೆರವಾಗಬೇಕು. ವ್ಯಸನಮುಕ್ತರಾಗಲು ಚಿಕಿತ್ಸೆ ಹಾಗೂ ಮಾರ್ಗದರ್ಶನ ಪಡೆಯುತ್ತಿರುವವರಿಗೆ ಆತ್ಮಸ್ಥೈರ್ಯ ತುಂಬಿ, ಅವರು ಮತ್ತೆ ದುಶ್ಚಟಗಳತ್ತ ಮರಳದಂತೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದರು.
ವಿದ್ಯಾರ್ಥಿಗಳು ಹಾಗೂ ಯುವಜನರು ದೇಶದ ಭವಿಷ್ಯವಾಗಿದ್ದು, ಈ ಹಂತದಲ್ಲಿಯೇ ದುಶ್ಚಟಗಳ ಅಪಾಯದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯ. ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ‘ಸ್ವಾಸ್ಥ್ಯ ಸಂಕಲ್ಪ’ ಸೇರಿದಂತೆ ಜನಜಾಗೃತಿ ಕಾರ್ಯಕ್ರಮಗಳು ಯುವಜನರನ್ನು ದುಶ್ಚಟಗಳಿಂದ ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರ ಅಥವಾ ಒಂದು ಸಂಘಟನೆಯ ಜವಾಬ್ದಾರಿಯಲ್ಲ. ಕುಟುಂಬ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ನಾಗರಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಶಾಶ್ವತ ಬದಲಾವಣೆ ತರಲು ಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಂಸ್ಥೆ ವತಿಯಿಂದ ನಡೆಸಲಾಗುತ್ತದೆ ಸಮಾಜವು ಸಹ ನಮ್ಮ ಜೊತೆ ಕೈಜೋಡಿಸಿದಲ್ಲಿ ನಿರ್ಮಾಣ ಮಾಡಲು ಸಾಧ್ಯ ಎಂದರು.

ವ್ಯಸನಮುಕ್ತರಾದವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿ, ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು. ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುವುದರ ಜತೆಗೆ ಇತರರಿಗೂ ಮಾದರಿಯಾಗಬೇಕು. ಒಬ್ಬ ವ್ಯಕ್ತಿ ವ್ಯಸನಮುಕ್ತನಾದರೆ ಅದರ ಸಕಾರಾತ್ಮಕ ಪರಿಣಾಮ ಇಡೀ ಕುಟುಂಬದ ಮೇಲೆ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬ ವ್ಯಸನಮುಕ್ತ ವ್ಯಕ್ತಿಯೂ ಸಮಾಜದ ಆಸ್ತಿಯಾಗಬೇಕು ಎಂದು ಆಶಿಸಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣದ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಂಡು, ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಜನರಲ್ಲೂ ಜಾಗೃತಿ ಮೂಡಿಸಬೇಕು. ಆರೋಗ್ಯವಂತ ವ್ಯಕ್ತಿಗಳಿಂದ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಕುಟುಂಬಗಳಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ  ಸಿದ್ದಲಿಂಗ ಪ್ರಭು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವ್ಯಸನಮುಕ್ತರಾದವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಂ. ಭಾಸ್ಕರ್ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕಚೇರಿ ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಅವರು ಆಶಯ ಭಾಷಣ ಮಾಡಿದರು.

ಬಳ್ಳಾರಿ ಧರ್ಮಾಧ್ಯಕ್ಷರಾದ ಡಾ. ಹೆನ್ರಿ ಡಿ’ಸೋಜ, ಧರ್ಮಗುರುಗಳಾದ  ಹಜರತ್ ಖಾಜಿ ಮಹ್ಮದ್ ಸಿದ್ದಿಬಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಮಾಹಾಂತೇಶ್, ರಾಘವ ಕಲಾ ಮಂದಿರದ ಅಧ್ಯಕ್ಷ ಕೋಟೇಶ್ವರ್ ರಾವ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ರೆಡ್ಡಿ, ಸಂಸ್ಥೆಯ ಬಸವರಾಜ್, ಮೌನೇಶ್,  ಸತೀಶ್,  ಆಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ರೋಹಿತಾಕ್ಷ ಸ್ವಾಗತಿಸಿದರು. ರೂಪಶ್ರೀ ನಿರೂಪಿಸಿದರು,

Leave a Reply

Your email address will not be published. Required fields are marked *