ಬಳ್ಳಾರಿಯಲ್ಲಿ  ತುಂಗಭದ್ರಾ ಜಲಾಶಯದ ತುರ್ತು  ನೀರಾವರಿ ಸಭೆ ಕರೆಯಲು ಡಾ. ದರೂರು ಪುರುಷೋತ್ತಮ ಗೌಡ ಒತ್ತಾಯ

ಬಳ್ಳಾರಿ,ಅ.8: ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳ ವ್ಯಾಪ್ತಿಯ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕು.  ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಶಾಸಕರನ್ನು ಒಳಗೊಂಡಂತೆ ನೀರಾವರಿ ತುರ್ತು ಸಭೆ ಕರೆಯಬೇಕು ಎಂದು ತುಂಗಭದ್ರ ರೈತ ಸಂಘದ ರಾಜ್ಯಾಧ್ಯಕ್ಷ ಡಾ.ದರೂರು ಪುರುಷೋತ್ತಮ ಗೌಡ  ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು.

 ತುಂಗಭದ್ರ ಜಲಾಶಯದ ಮುಖ್ಯ ಅಭಿಯಂತರರು, ಮುನಿರಾಬಾದ್, ಅಧೀಕ್ಷಕ ಅಭಿಯಂತರರು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ,  ಜಲಸಂಪನ್ಮೂಲ ಇಲಾಖೆಯ ಅಭಿಯಂತರರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡಂತೆ ಬಳ್ಳಾರಿಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ಸೇರಿ  ಚರ್ಚಿಸಬೇಕು ಎಂದು ಹೇಳಿದರು.

ಆ.11ರಂದು ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ದಿನ ಜಲಾಶಯದಲ್ಲಿ 82 ಟಿಎಂಸಿ ನೀರು ಸಂಗ್ರಹವಿದ್ದು, 30 ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಸಭೆಯಲ್ಲಿ ಕರ್ನಾಟಕ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ತುಂಗಭದ್ರ ನದಿ ಸೇರಿದಂತೆ ಎಲ್ಲ ಕಾಲುವೆಗಳ ಮೂಲಕ ಒಟ್ಟಾರೆ ಪ್ರತಿದಿನ 9 ಸಾವಿರ ಕ್ಯೂಸೆಕ್ ನೀರು ಬಳಸುವಂತೆ ತೀರ್ಮಾನಿಸಲಾಗಿತ್ತು ಎಂದು ಅವರು ತಿಳಿಸಿದರು.

ಈ ವರ್ಷ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ನೀರು ಪೂರೈಸಬಾರದು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿತ್ತು.  ಆದರೆ, ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಜಲಾಶಯದಿಂದ ಕಾರ್ಖಾನಗಳಿಗೆ ಹೆಚ್ಚುವರಿ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿದೆ. ಪ್ರತಿದಿನ ಸರಾಸರಿ 10 ಸಾವಿರ ಕ್ಯೂಸೆಕ್‌ ಗೂ ಅಧಿಕ ನೀರು ಬಳಕೆಯಾಗುತ್ತಿದೆ ಎಂದು  ಆರೋಪಿಸಿದ ಅವರು ಇದರಿಂದ ರೈತರಲ್ಲಿ ಆತಂಕ ಮೂಡಿಸಿದೆ ಎಂದರು.

ನೀರಾವರಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರೈತರು ನಂಬಿ ತಮ್ಮ ಹೊಲದಲ್ಲಿ  ಬೆಳೆ ನಾಟಿ ಮಾಡಿದ್ದಾರೆ ಈಗ ಆ ಬೆಳೆಗಳಿಗೆ ಸರಿಯಾಗಿ ನೀರು ಒದಗಿಸಿದೆ ಇರುವುದರಿಂದ ರೈತರ ಪರಿಸ್ಥಿತಿಗಳು ಹೇಗೆ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ತುಂಗಭದ್ರ ರೈತ ಸಂಘದ ಮುಖಂಡರುಗಳಾದ ಕೃಷ್ಣಾನಗರ ಕ್ಯಾಂಪ್‌ನ ಡಿ.ಶಿವಯ್ಯ, ದರೂರು ಜಿ.ಸಾಗರಗೌಡ, ದರೂರು ಎಂ. ವೀರಭದ್ರ ನಾಯಕ, ಶ್ರೀಧರಗಡ್ಡೆ ವೀರನಗೌಡ, ಜಾಲಿಹಾಳ್ ಶ್ರೀಧರಗೌಡ, ಕೊರಗುಂದಿ ತಿಪ್ಪಾರೆಡ್ಡಿ ಕೆ.ಎಲ್., ಆರ್.ರಾಮಕೃಷ್ಣ, ಕೊಂಚಿಗೇರಿ ಗೋವಿಂದಪ್ಪ, ರಾಜಾಗೌಡ, ಎತ್ತಿನಬೂದಿಹಾಳ್ ಕೆ.ಮಾರೆಣ್ಣ, ಈರಾಳು ಗಂಗಾರೆಡ್ಡಿ, ಕೃಷ್ಣಾನಗರ ಕ್ಯಾಂಪ್‌ನ ರುದ್ರಯ್ಯ, ಕೃಷ್ಣಾನಗರ ಕ್ಯಾಂಪ್‌ನ ಎನ್.ಶ್ರೀನಿವಾಸ್, ದರೂರು ಬಸವರಾಜ್, ಸೋಮಸಮುದ್ರದ ಲಿಂಗಾರೆಡ್ಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *