ಅನುದಿನ ಕವನ-೧೯೯೩, ಕವಿ: ಹಂದಿಕುಂಟೆ ನಾಗರಾಜ್, ಸಿರಾ, ಕವನದ ಶೀರ್ಷಿಕೆ: ಕೇಳಿಲ್ಲಿ ಆತ್ಮಸಖನೇ..!!

ಕೇಳಿಲ್ಲಿ ಆತ್ಮಸಖನೇ..!!

ನೀನು ಹೋದ ಮೇಲೂ
ಇಲ್ಲಿ ಮತ್ತೆ ಸೂರ್ಯ ಹುಟ್ಟಿದ್ದಾನೆ,
ಭರ್ತಿ ಬೆಳಕು: ನಿಜ.

ಎಂದಿನಂತೆ ಅದೇ ಕಲರವದ
ಬೆಳಗುಗಳು ಹಕ್ಕಿ ಇಂಚರ
ತುಸು ಹೆಚ್ಚೇ,
ಇಬ್ಬನಿ ಸುರಿದ ಮೊಗ್ಗು, ಹೂ, ಎಲೆಗಳ ಮೇಲೆ
ಸೂರ್ಯ ಬಿಂಬದ ಹಚ್ಚೆ,

ಈಗೀಗ ರಾತ್ರಿಗಳಂತೂ
ತೀರಾ ನೀಳವೆನಿಸುವುದಿಲ್ಲ
ಬೆಳಕು ಕರೆಯುತ್ತದೆ ಬಯಲಿಗೆ,
ಇಬ್ಬನಿ ಕುಡಿದ ಹುಲ್ಲು
ಅಂಗಾಲ ಸವರಿ ಕಚಗುಳಿಯಿಕ್ಕಿ
ಸಂತೈಸುತ್ತವೆ,
ಕರುಣೆಗೆ ಜಗತ್ತಿನಲ್ಲಿ ಇನ್ನೂ ಜಾಗವಿದೆ: ಖಂಡಿತ.!
ಇರಲಿ ಬಿಡು ನಿನ್ನನ್ನೇ ನೀನು ನಿರ್ದಯಿಯೆಂದು ಭಾವಿಸಬೇಡ.

ನಿನಗೆ ಗೊತ್ತಾ..!?
ಇಲ್ಲಿ ಮತ್ತೆ ಮಳೆ,
ಥೇಟು ನಿನ್ನ ನೆನಪಿನಂತಹುದು
ಸುಮ್ಮನೆ ಸುರಿಯುತ್ತಿದೆ,
ಹಗಲು ಇರುಳುಗಳ ಲೆಕ್ಕ ಮರೆತು.

ಮತ್ತೆ ಹಸುರು ಉಟ್ಟಿವೆ ಮರಗಿಡಗಳು,
ಸ್ವಚ್ಚಂದ ತಂಬೆಲರು ನಡೆವ ಹಾದಿಯ ತುಂಬಾ,

ಹಕ್ಕಿಗಳಿನ್ನೂ ಹಾಡು ಮರೆತಿಲ್ಲ
ಅದೆಷ್ಟು ಬಾರಿ ಕಂಠಪಾಠ
ಮಾಡಿಸಿದ್ದೆಯೋ ನೀನು,
ಕೋಗಿಲೆಯು ಹಾಡಿದರೆ,
ನವಿಲು ನರ್ತಿಸುತ್ತವೆ ಸ್ವಾಗತಕ್ಕೆ.

ಈಗ ಹೇಳು
ಏಕಾಂಗಿಯಾಗಿಸಿದ್ದೇನೆಂಬ
ನಿನ್ನ ಸಂಭ್ರಮಕ್ಕೆ ಇನ್ನೂ ತೂಕವಿದೆಯೇ..?

ನಿನ್ನೂರ ಹಾದಿಗೂ
ಹಸುರು ಹಬ್ಬಲಿ ಗೆಳೆಯ,
ನೆನಪುಗಳ ಸಾಲ ಕೇಳಬೇಡ
ಇರುವ ಅಷ್ಟೂ ನನಗೆ ಇರಲಿ.

ಬರುವುದಿದ್ದರೆ
ಮತ್ತೆ ಕನಸಿಗೆ ಬಾ ಅಷ್ಟೇ
ಬದುಕಿಗೆ ‘ಬರ’ದವನೇ…!!


-ಹಂದಿಕುಂಟೆ ನಾಗರಾಜ, ಸಿರಾ

Leave a Reply

Your email address will not be published. Required fields are marked *