ಅನುದಿನ ಕವನ-೧೯೯೬, ಕವಿ(ತೆಲುಗು ಮೂಲ): ರಾಜಾಬಾಬು ಕಂಚರ್ಲ, ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ, ನೆಲವಾಗಿಲು, ಕವನದ ಶೀರ್ಷಿಕೆ: ಚುಚ್ಚುತ್ತಿರುವ ಕಲ್ಲುಗಳು

ಚುಚ್ಚುತ್ತಿರುವ ಕಲ್ಲುಗಳು

ದೊಡ್ಡವರು ನಾಲ್ಕು ಕಲ್ಲುಗಳನ್ನು
ಹಿಂದೆ ಹಾಕಿಕೋ ಎಂದರೆ
ಒಂದು ಮರ ಮಾತ್ರ ಎರಡು ಕಲ್ಲುಗಳನ್ನು
ತನ್ನ ಬೇರುಗಳಲ್ಲಿ ಬಚ್ಚಿಟ್ಟುಕೊಂಡಿದೆ

ಅವು ಮಣ್ಣಿನಲ್ಲಿ ಹೂತುಹೋದವಲ್ಲ
ಬೇರುಗಳ ಮಧ್ಯೆ ಸದ್ದಿಲ್ಲದೆ ಸೇರಿಕೊಂಡು
ಮರ ಅಲುಗಾಡಿದ ಪ್ರತೀ ಸಲವೂ
ಒಳಗಿನಿಂದ ನೋವನ್ನು ಕೆರಳಿಸುತ್ತಿಹವು

ಹೊರಗಿನಿಂದ ನೋಡಿದರೆ
ಮರ ಮಾಮೂಲಿಯಾಗಿಯೇ ಇದೆ
ಎಲೆಗಳು ಹಸಿರಾಗಿ, ಕೊಂಬೆಗಳು ನಿಶ್ಶಬ್ದವಾಗಿ
ಆದರೆ ಪ್ರತೀ ಸಲದ ಗಾಳಿಯ ರಭಸಕ್ಕೂ
ಆ ಎರಡು ಕಲ್ಲುಗಳು
ಬೇರುಗಳನ್ನು ಒಳಗಿನಿಂದ ಚುಚ್ಚುತ್ತಿವೆ

ಆಗಲೇ ತನ್ನ ಗೆಳತಿ
ಬೆಳದಿಂಗಳ ಹಕ್ಕಿ ನೆನಪಾಗುವುದು
ಅದು ಕೊಂಬೆಯ ಮೇಲೆ ಕೂತರೆ ಸಾಕು
ವಸಂತ ಬಂದಂತೆ ಅರಳುವುದು ಮರ

ಯಾವುದೋ ದೂರ ತೀರದಲ್ಲಿರುವ
ಬೆಳದಿಂಗಳ ಹಕ್ಕಿಯನ್ನು ಕರೆಯಬೇಕೆನಿಸುತ್ತಿದೆ
ಒಮ್ಮೆ ಬರಲಾರೆಯಾ ಎಂದು
ಒಳಗೆ ಅಡಗಿರುವ ಎರಡು ಕಲ್ಲುಗಳು
ಎಷ್ಟು ನೋಯಿಸುತ್ತಿವೆಯೋ ಹೇಳಬೇಕೆಂದು
ಆದರೆ ಮರಕ್ಕೆ ದನಿಯಿಲ್ಲ
ಆ ಬೆಳದಿಂಗಳ ಹಕ್ಕಿಗೆ ಮನಸ್ಸೇ ಇಲ್ಲ!

ಎಂದಾದರೂ ಆ ಹಕ್ಕಿ ಮರಳಿ ಬಂದು
ಆ ಕೊಂಬೆಯ ಮೇಲೆ ಕೂತರೆ
ಈ ಮರ ಒಂದು ಮಾತಾಡದಿದ್ದರೂ
ಅದರ ಬೇರುಗಳಲ್ಲಿ ಚುಚ್ಚುತ್ತಿರುವ ಕಲ್ಲುಗಳಿಗಿಂತ
ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡ ಕಾಯುವಿಕೆಯೇ ಎಷ್ಟೋ ಭಾರವೆಂದು
ಆ ಹಕ್ಕಿಗೆ ಆಗಲಾದರೂ ಅರ್ಥವಾಗುವುದೆ?

ತೆಲುಗು ಮೂಲ : ರಾಜಾಬಾಬು ಕಂಚರ್ಲ

ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ, ನೆಲವಾಗಿಲು

Leave a Reply

Your email address will not be published. Required fields are marked *