ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕರಾಗಿದ್ದ ಬಂಡಿಗಡಿ ನಂಜುಂಡಪ್ಪ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಂಘದ ಬಗ್ಗೆ ಸದಾ ಬದ್ದತೆ ಇಟ್ಟುಕೊಂಡಿದ್ದರು. ಪತ್ರಿಕಾ ಕ್ಷೇತ್ರ ಹಾಗೂ ಪತ್ರಕರ್ತರ ಸಂಘಟನೆಯ ಬೆಳವಣಿಗೆಗೆ ನಂಜುಂಡಪ್ಪ ಅವರು ನೀಡಿದ ಕೊಡುಗೆಯನ್ನು ಕೆಯುಡಬ್ಲ್ಯೂಜೆ ಸ್ಮರಿಸಿದೆ.
ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸಿದ ಅವರು, ಚಂದಾದಾರರಿಗೆ ಪ್ರತಿದಿನವೂ ಪತ್ರಿಕೆ ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದರು. ಸ್ವತಃ ಅಂಚೆ ಚೀಟಿ ಅಂಟಿಸಿ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುತ್ತಿದ್ದ ಅವರ ಪತ್ರಿಕಾ ಬದ್ಧತೆ ಹಾಗೂ ನಿಷ್ಠೆ ಸ್ಮರಣೀಯ ಎಂದು ಸಂಘ ತಿಳಿಸಿದೆ.
ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಅವರು, ಪತ್ರಕರ್ತರ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರೋತ್ಸಾಹ ನೀಡುತ್ತಿದ್ದರು.
ವಿಶೇಷವೆಂದರೆ, 75ರ ಇಳಿ ವಯಸ್ಸಿನಲ್ಲಿಯೂ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದ ಅವರು, ಎಲ್ಲರೊಂದಿಗೂ ಸ್ನೇಹದಿಂದ ಬೆರೆಯುವ ಮೂಲಕ ಆತ್ಮೀಯತೆ ಗಳಿಸಿದ್ದರು. ಯಾರೊಂದಿಗೂ ವಿರಸ ಮಾಡಿಕೊಳ್ಳದೆ, ಸದಾ ಚಟುವಟಿಕೆಯಿಂದ ಇರುತ್ತಿದ್ದ ಅವರ ಅಗಲಿಕೆ ಪತ್ರಿಕಾ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಯುಡಬ್ಲ್ಯೂಜೆ ತಿಳಿಸಿದೆ.
ನಂಜುಂಡಪ್ಪ ಅವರ ಅಗಲಿಕೆಯಿಂದ ದುಃಖತಪ್ತರಾದ ಕುಟುಂಬದ ಸದಸ್ಯರು ಹಾಗೂ ಬಂಧುಮಿತ್ರರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಾರ್ಥಿಸಿದ್ದಾರೆ.
