ಅನುದಿನ ಕವನ-೧೯೯೮, ಕವಿ(ತೆಲುಗು ಮೂಲ): ರಾಜಾಬಾಬು ಕಂಚರ್ಲ, ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ, ನೆಲವಾಗಿಲು, ಕವನದ ಶೀರ್ಷಿಕೆ:ಶರದೃತುವಿನ ಹೊತ್ತು…

ಶರದೃತುವಿನ ಹೊತ್ತು…

ಒಂದು ಶರದೃತುವಿನ ಹೊತ್ತು
ಮಳೆಯ ಕೊನೆಯ ಕುರುಹುಗಳು
ಮಣ್ಣಿನ ವಾಸನೆಯಲ್ಲಿ ಉಳಿದಿರುವಾಗ
ಹಗಲು ಮಂಜು ಮೆತ್ತಿದ ಪಾದಗಳೊಂದಿಗೆ
ಮೆಲ್ಲಗೆ ಮನೆಗೆ ಬರುವುದು

ಮಳೆಯಲ್ಲಿ ಮಿಂದ ಮರಗಳು
ಹೊಸದಾಗಿ ಕಂಗೊಳಿಸುವವು
ಕೊಂಬೆಗಳ ನಡುವೆ ಬೆಳ್ಳಿ ಮೋಡಗಳು
ಅವಸರವರಿಯದ ಪಯಣಿಗರಂತೆ
ಮೆಲ್ಲನೆ ಸಾಗುವವು

ಹೊಲಗಳಲ್ಲಿ ಹೊಮ್ಮುವುದು
ಬಲಿತ ಭತ್ತದ ತೆನೆಗಳ ಪರಿಮಳ
ತೋಯ್ದ ನೆಲದೊಂದಿಗೆ ಬೆರೆತು
ದೂರದ ಮನೆಯೊಂದು ಬಾಗಿಲು ತೆರೆದಂತೆ
ಮನಸ್ಸಿನ ಒಳಗೆ ಅಡಿಯಿಡುವುದು

ಬಲಿತ ಭತ್ತದ ತೆನೆಗಳು
ಭಾರವಾಗಿ ತಲೆಗಳು ಬಾಗುವವು
ಭೂಮಿ ತನ್ನೊಳಗೆ ಬಚ್ಚಿಟ್ಟಕೊಂಡ
ಸಮೃದ್ಧಿಗೆ ನಮಿಸಿದಂತೆ

ಕೆರೆಯು ಮಳೆಯಬ್ಬರದ ಉಬ್ಬರವನ್ನು ದಾಟಿ
ಮತ್ತೆ ನಿಶ್ಚಲವಾಗುವುದು
ತಾವರೆ ಹೂವು ತಾನಾಗೇ ಅರಳಿದರೆ
ಹೊಸ ಬೆಳಗು ಅಲ್ಲೇ ಹುಟ್ಟಿದಂತನಿಸುವುದು

ಮಧ್ಯಾಹ್ನದ ಬಿಸಿಲಿನ್ನು ಸುಡುವುದಿಲ್ಲ
ದೀರ್ಘ ಪ್ರಯಾಣದ ನಂತರ
ಹೆಗಲ ಮೇಲೆ ಬೀಳುವ ಗೆಳೆಯನ ಕೈಯಂತೆ
ಬೆಚ್ಚಗೆ ಅನಿಸುವುದು

ಸಂಜೆ ಬೇಗನೆ ಇಳಿಯುವುದು
ಬಾಗಿಲುಗಳಲ್ಲಿ ದೀಪಗಳು ಅರಳುವವು
ದೂರದ ಅಡುಗೆಮನೆಯ ಘಮ ಹರಡುವುದು
ಹಕ್ಕಿಗಳು ಗೂಡಿಗೆ ಮರಳಿ ಬರುವವು
ದಿನವಿಡೀ ಚೆಲ್ಲಾಪಿಲ್ಲಿಯಾದ ಜೀವನ
ಚೆಂದದ ಚಿತ್ತಾರವಾಗುವುದು

ರಾತ್ರಿ ಚಂದ್ರನ ಬೆಳಕಿನಲ್ಲಿ
ಮರಗಳ ನೆರಳು ಉದ್ದವಾಗುವುದು
ದೂರದಲ್ಲಿ ಎಲೆ ಉದುರುವ ಸದ್ದೂ ಕೇಳಿಸುವಷ್ಟು ಮೆಲ್ಲಗೆ
ಗಾಳಿ ಹಿತವಾಗಿ ಬೀಸುವುದು

ಇದು
ಮಳೆ ಮುಗಿದ ಕಾಲವಲ್ಲ
ಪ್ರಕೃತಿ ಗಡಿಬಿಡಿಯನ್ನು ಬದಿಗಿಟ್ಟು
ತನ್ನ ನಿಜವಾದ ದನಿ ಕೇಳಿಸುವ ಕಾಲ

ಅಂತಹ ಹೊತ್ತಿನಲ್ಲಿ
ಒಂದು ಎಲೆ ಉದುರುವುದು
ಮರ ಅದನ್ನು ತಡೆಯುವುದಿಲ್ಲ
ನೆಲ ಅದನ್ನು ತಿರಸ್ಕರಿಸುವುದಿಲ್ಲ

ಆ ಉದುರುವಿಕೆಯಲ್ಲೇ
ಇಡೀ ಋತು ಹಾಡುವುದು
ಮಳೆಯ ಒದ್ದೆ, ಬಲಿತ ಫಸಲು
ಇಬ್ಬನಿಯ ಚಳಿ, ಬೆಳದಿಂಗಳ ನಿಶ್ಯಬ್ದ
ಎಲ್ಲವೂ ಒಂದು ಕ್ಷಣ ನೆಲವನ್ನು ಅಪ್ಪಿಕೊಂಡಂತೆ

ತೆಲುಗು ಮೂಲ : ರಾಜಾಬಾಬು ಕಂಚರ್ಲ

ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ,  ನೆಲವಾಗಿಲು

Leave a Reply

Your email address will not be published. Required fields are marked *