“ಇದು ಗಡಿಯಾರ ಕಟ್ಟಿಕೊಂಡು ಮೆರೆವ ನಮ್ಮದೇ ಬಡಿವಾರದ ವಿಡಂಬನೆಯ ಕವಿತೆ. ನಮ್ಮದೇ ಗಡಿಯಾರದ ಆಟಾಟೋಪಗಳ ಸಾರುವ ಮಾರ್ಮಿಕ ಭಾವಗೀತೆ. ಕಾಲ ಕಾಲನ ಆಟ-ಮಾಟ-ಕೂಟಗಳ ಮರೆತು ಮೆರೆವ ನಮ್ಮೆದೆಯಲೊಂದು ಕಾಲದರಿವಿನ ಹೊಂಬೆಳಕು ಮೂಡಿಸುವ ಅಕ್ಷರಪ್ರಣತೆ. ಹೆಚ್ಚೇನೂ ಹೇಳಲಾರೆ.. ಇದು ನಮ್ಮ-ನಿಮ್ಮದೇ ದೈನಂದಿನ ವ್ಯವಹಾರಗಳ ಸ್ವಾನುಭವ. ಸುತ್ತ-ಮುತ್ತಲ ವಿದ್ಯಮಾನಗಳ ನಿತ್ಯ ಸತ್ಯ ಲೋಕಾನುಭಾವ. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಗಡಿಯಾರದ ಬಡಿವಾರ.!
ಮನೆಯ ಪ್ರತಿ ಕೋಣೆ ಕೋಣೆಯ
ಗೋಡೆಗೂ ನೇತುಹಾಕಿ ಗಡಿಯಾರ
ಸಮಯವೇ ನಮ್ಮದೆಂಬ ಬಡಿವಾರ
ಕಾಲವೇ ನಮಗಾಗಿ ಓಡುತಿಹುದೆಂಬ
ವಿಧ-ವಿಧ ನಡೆ-ನುಡಿಗಳ ಅವಸರ.!
ನಿತ್ಯ ಸೂರ್ಯ-ಚಂದ್ರರ ಆಡಿಸುತ್ತಾ
ಹಗಲು-ರಾತ್ರಿಗಳ ದಿನವೂ ನಡೆಸುತ್ತಾ
ಆಡುತ್ತ ನೆಳಲು-ಬೆಳಕಿನಾಟದ ಗಾರುಡಿ
ಕುಳಿತ ಆ ವಿಧಾತ ನಸುನಗುವ ನೋಡಿ
ನಮ್ಮೆಲ್ಲ ಈ ಬಗೆ-ಬಗೆ ನಾನಾವತಾರ.!
ಸದಾ ಕಟ್ಟಿಕೊಂಡು ಮುಂಗೈಗೊಂದು
ಬೆಲೆಬಾಳುವ ಅಮೂಲ್ಯ ಕೈಗಡಿಯಾರ
ವೇಳೆಯೇ ನಮ್ಮ ಅಧೀನವೆಂಬ ಅಬ್ಬರ
ಪದೇಪದೇ ಮುಟ್ಟಿನೋಡಿಕೊಳ್ಳುತ್ತಾ ಕರ
ಕಾಲವೇ ನಮ್ಮ ಕೈಲಿದೆಯೆಂಬ ಠೇಂಕಾರ.!
ವಾರ ಮಾಸ ಋತುಮಾನ ಬದಲಿಸುತ್ತಾ
ವರ್ಷ ಸಂವತ್ಸರಗಳ ಬದಲಾಯಿಸುತ್ತಾ
ನುಡಿಸುತ್ತ ಚರಾಚರಗಳ ಭಾವದಾಂಗುಡಿ
ಕುಳಿತ ಅಗೋಚರ ಮುಗುಳ್ನಗುವ ನೋಡಿ
ನಮ್ಮೆಲ್ಲ ಈ ದೊಂಬರಾಟಗಳ ಅವಾಂತರ.!
ಕೆಲಸದ ಉಸ್ತುವಾರಿಗೆ ಮೇಜಿನ ಗಡಿಯಾರ
ಮಲಗಿದಾಗ ಎಚ್ಚರಿಸಲು ಅಲಾರಾಂ ಸ್ವರ
ಪ್ರತಿಕ್ಷಣ ನಮ್ಮಂಕೆಯಲಿದೆಯೆಂಬ ಆಡಂಬರ
ಪಂಚಾಂಗ ಕ್ಯಾಲೆಂಡರು ಲೆಕ್ಕಗಳ ಕಾರುಭಾರ
ಸಮಯಕೆ ನಾವೇ ಒಡೆಯರೆಂಬ ಅಧಿಕಾರ.!
ಸೃಷ್ಟಿ-ಸ್ಥಿತಿ-ಲಯಗಳ ಚಕ್ರವನು ತಿರುಗಿಸುತ್ತ
ಯುಗಯುಗಗಳ ಅವಧಿಯನೇ ನಿರ್ಧರಿಸುತ್ತ
ಮಾಡುತ್ತ ಜಗಕೆಲ್ಲ ಕಾಲ-ಮಾಟದ ಮೋಡಿ
ಕುಳಿತ ನಿಯಾಮಕ ಮೆಲ್ಲ ನಗುವನು ನೋಡಿ
ನಮ್ಮೆಲ್ಲ ಈ ಅಹಂ ಆತ್ಮರತಿಗಳ ವ್ಯವಹಾರ.!
ಕೊಂಡುಕೊಂಡು ತರ ತರಾವರಿ ಗಡಿಯಾರ
ಸಮಯವನೇ ಖರೀದಿಸಿದಿವೆಂಬ ಅಹಂಕಾರ
ನಮ್ಮೆದುರು ಕಾಲವೇ ಕೀಳೆಂಬ ಕಾರ್ಯಭಾರ
ಕಾಲವನೇ ಮೆಟ್ಟಿ ನಿಲ್ಲುವ ದರ್ಪ ಹುನ್ನಾರ
ಸಮಯದ ಮೇಲೆ ಸವಾರಿಮಾಡುವ ಆಚಾರ.!
ನಮ್ಮಲ್ಲೇ ಲಬ್-ಡಬ್ಬೆನುವ ಗಡಿಯಾರವನಿಟ್ಟು
ಅದರ ಛಾವಿ-ಚಾಲನೆಗಳ ತನ್ನಲಿಟ್ಟುಕೊಂಡು
ಕುಳಿತ ಕಾಲಮರ್ಮ ಬಲ್ಲ ಅದೃಶ್ಯ ಸೂತ್ರಧಾರ
ನಗುತಿಹನು ನೋಡಿ ನಮ್ಮ ಗಡಿಯಾರ ಲೀಲೆ
ನಮ್ಮೆದೆ ಬಡಿತದ ಆಯಸ್ಸಿಗೆ ಅವನದೇ ಸೆಲೆ.!

-ಎ.ಎನ್.ರಮೇಶ್, ಗುಬ್ಬಿ.
