
ಬಳ್ಳಾರಿ, ನ. 28: ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಬಳ್ಳಾರಿಯ ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳ್ ಅವರಿಗೆ ಮಹಾರಾಷ್ಟ್ರದ ಮುಂಬೈನಲ್ಲಿ ಶುಕ್ರವಾರ ನಡೆದ ಟಾಟಾ ಟ್ರಸ್ಟ್‌ನ ‘ಪರಾಗ್ ಉತ್ಸವ’ದಲ್ಲಿ ಪ್ರತಿಷ್ಠಿತ ‘ಪರಾಗ್ ಆಥರ್ ಪ್ರೈಜ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಟಾ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಚೊಚ್ಚಲ ಪ್ರಶಸ್ತಿಗೆ ಬಳ್ಳಾರಿಯ ಕೆ. ಶಿವಲಿಂಗಪ್ಪ ಹಂದಿಹಾಳ್ ಅವರು ಆಯ್ಕೆಯಾಗಿರುವುದು ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಸಾಧನೆಗೆ ಜಿಲ್ಲೆಯ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹಂದಿಹಾಳ್ ಅವರು ಮಾಡಿರುವ ಗಮನಾರ್ಹ ಕೆಲಸ, ಸಾಹಿತ್ಯಿಕ ಕೊಡುಗೆ ಹಾಗೂ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕದೊಂದಿಗೆ ₹2,50,000 ನಗದು ಬಹುಮಾನವನ್ನು ಒಳಗೊಂಡಿದೆ.
ಬಳ್ಳಾರಿಯ ಸಾಹಿತ್ಯ ಪ್ರತಿಭೆಯೊಂದಕ್ಕೆ ಅಂತರರಾಜ್ಯ ಮಟ್ಟದಲ್ಲಿ ಪ್ರತಿಷ್ಠಿತ ಮನ್ನಣೆ ದೊರೆತಿರುವುದು ಜಿಲ್ಲೆಯ ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಕೆ. ಶಿವಲಿಂಗಪ್ಪ ಹಂದಿಹಾಳ್ ಅವರ ಈ ಸಾಧನೆಗೆ ಹಿರಿಯ ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಹೆಚ್.ಎಂ(ಮಹಿಮ), ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಸಿ. ಮಂಜುನಾಥ್, ಸಾಹಿತಿಗಳಾದ ಡಾ. ದಸ್ತಗೀರ್ ಸಾಬ್ ದಿನ್ನಿ, ಸಿದ್ದರಾಮಯ್ಯ ಕಲ್ಮಠ, ವೀರೇಂದ್ರ ರಾವಿಹಾಳ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್, ನ್ಯಾಯವಾದಿ ಬಾದಾಮಿ ಶಿವಲಿಂಗನಾಯಕ, ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಡಾ. ಅಶ್ವರಾಮು, ಕವಿ ಡಾ. ಎಸ್. ಮಂಜುನಾಥ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
