ವಿಧಾನಸೌಧದಲ್ಲಿ ಪ್ರತಿ ಗುರುವಾರ ಸಾರ್ವಜನಿಕರಿಗೆ ಸಚಿವರು ಲಭ್ಯ : ಡಿಸಿಎಂ ಸವದಿ

ಬೆಂಗಳೂರು:ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸಿ ಸಚಿವರ ಮಟ್ಟದಲ್ಲಿ ಅವುಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗುರುವಾರದಂದು ಎಲ್ಲ ಸಚಿವರುಗಳು ಕಡ್ಡಾಯವಾಗಿ ವಿಧಾನಸೌಧ ಮತ್ತು ವಿಕಾಸಸೌಧದ ಅವರ ಕಚೇರಿಗಳಲ್ಲಿ ಲಭ್ಯವಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸಚಿವರುಗಳು ಖುದ್ದಾಗಿ ಹಾಜರಿರುವಂತೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾದ ಪ್ರಕಾರ ಇಂದು(ಗುರುವಾರ) ಸಚಿವರು ತಮ್ಮ ಕಚೇರಿಗಳಲ್ಲಿ ಸಾರ್ವಜನಿಕರ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೀಗೆ ಪ್ರತಿ ಗುರುವಾರ ಬಹುತೇಕ ಎಲ್ಲ ಸಚಿವರುಗಳು ವಿಧಾನಸೌಧ ಅಥವಾ ವಿಕಾಸಸೌಧದ ತಮ್ಮ ಕಚೇರಿಗಳಲ್ಲಿ ಲಭ್ಯ ಇರುವುದರಿಂದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರು ಸಚಿವರುಗಳ ಭೇಟಿಗಾಗಿ ಪ್ರಯಾಸ ಪಡುವುದನ್ನು ತಪ್ಪಿಸಲು ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
*****

Leave a Reply

Your email address will not be published. Required fields are marked *