ಅನುದಿನ ಕವನ-೨೬೦, ಕವಯತ್ರಿ:ಸುಧಾ ಚಿದಾನಂದ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಸಂಜೆಯ ನಿರೀಕ್ಷೆ

ಸಂಜೆಯ ನಿರೀಕ್ಷೆ….

ಜೊತೆಗೂಡಿ ಚಲಿಸುವ
ಚಂದಿರನ ದಿಟ್ಟಿಸುವ
ರಂಗು ಚೆಲ್ಲಿದಂತೆ ದಟೈಸಿದ ಮೋಡದಲಿ
ಚಲನೆಯ ಮಿಂಚಿತ್ತು
ಯಾವುದೋ ಹೊಂಚಿತ್ತು

ಬಣ್ಣಗಳಿದ್ದವು ಕನಸಿನಲಿ
ಆಸೆಗಳಿದ್ದವು ಮನಸಿನಲಿ
ಸಂಜೆ ಹೀಗಿರಲಿ
ಗಿಣಿ ಮಾವನ್ನು ಸ್ವಲ್ಪವೇ ಕಚ್ಚಿದಂತೆ
ರುಚಿ ಹೆಚ್ಚಿದಂತೆ

ಅವನುಸಿರಲಿ ಇವಳ ಸಂಕಟ
ಅವಳ ಕಣ್ಣಲಿ ಇವನ ಮನಮರ್ಕಟ
ಇಂದು ಒಂದುಗೂಡಿ
ಮತ್ತೆಂದೂ ಬೇರಾಗುವುದು ಬೇಡೆಂದು
ಶಪಥದ ಸ್ವಾದ ಹಚ್ಚಿದಂತೆ

ಸಂಜೆಯೊಂದು ಹೀಗಿರಲಿ
ಗಿಳಿಯೂ ಮಾವೂ
ಹಸಿರೆಲೆಯ ಮರೆಯಲಿ
ತುಟಿಸವರಿ ಮುಖವುಜ್ಜಿ ಸ್ವಲ್ಪವೇ ನಕ್ಕಂತೆ
ಎದೆಯ ಹೆದೆಯೇರಿ ತೋಳು, ಕಟಿ ಬೆರೆಸಿ
ಮತ್ತೆ ಬೇರಾಗುವ ಮಾತು ಬೇಡವೆಂದು
ಮತ್ತಿನಲಿ ಮುತ್ತು ಕೊಟ್ಟುಕೊಂಡಂತೆ
ಸಂಜೆಯೊಂದು ಹೀಗೆಯೆ ಇರಲಿ

-ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ


*****

Leave a Reply

Your email address will not be published. Required fields are marked *