ಏ.12ರಂದು ಕನ್ನಡ ವಿವಿ 30ನೇ ನುಡಿಹಬ್ಬ: ಗೊರುಚ, ಭಾಷ್ಯಂಸ್ವಾಮಿ, ಪ್ರೊ.ವೆಂಕಟಾಚಲ ಶಾಸ್ತ್ರೀಗೆ ನಾಡೋಜ ಪ್ರದಾನ

ಹೊಸಪೇಟೆ(ವಿಜಯನಗರ),ಏ.7: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಗೊ.ರು.ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ, ಪ್ರೊ. ವೆಂಕಟಾಚಲ ಶಾಸ್ತ್ರೀ ಅವರು ಭಾಜನರಾಗಿದ್ದಾರೆ ಎಂದು ವಿವಿಯ ಕುಲಪತಿ
ಡಾ.ಸ.ಚಿ.ರಮೇಶ ಅವರು ತಿಳಿಸಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಏ.12ರಂದು ಮಂಗಳವಾರ ಸಂಜೆ 5:30ಕ್ಕೆ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೊಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.


ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರು ಘಟಿಕೋತ್ಸವ ಭಾಷಣವನ್ನು
ಮಾಡಲಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ, ಪತ್ರಕರ್ತ ಪದ್ಮರಾಜ್ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್.ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1380 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಪ್ರದಾನ ಮಾಡುವರು ಎಂದು ಹೇಳಿದರು.


ಈ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ. ಹಾಗೂ ಕನ್ನಡ ವಿಶ್ವವಿದ್ಯಾಲಯದ ಡೀನ್ ಬಾಷಾ ನಿಕಾಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ, ಡೀನ್ ಸಮಾಜವಿಜ್ಞಾನ ನಿಕಾಯ ಪ್ರಾಧ್ಯಾಪಕ ಡಾ.ಸಿ.ಎಸ್.ವಾಸುದೇವನ್, ಡೀನ್ ವಿಜ್ಞಾನಗಳ ನಿಕಾಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ, ಪ್ರಸಾರಾಂಗ ನಿರ್ದೇಶಕಿ ಡಾ.ಶೈಲಜಾ ಇಂ.ಹಿರೇಮಠ, ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ ಹಾಗೂ ಹಿರಿಯ ಪ್ರಾಧ್ಯಾಪಕರು ಇದ್ದರು.
*****

Leave a Reply

Your email address will not be published. Required fields are marked *