ಅನುದಿನ‌ ಕವನ-೬೩೦, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು ಕವನದ ಶೀರ್ಷಿಕೆ: ನೆನಪುಗಳು

ನೆನಪುಗಳು

ಕಾಡುತ್ತಾವ ನೆನಪುಗಳು
ಬಾಡಿಹೋದ ಹೂವಿನ
ಕರಗಿಹೋದ ಗಂಧದೊಳು
ಕ್ಷಣಕಾಲ ಮಿಂದೆದ್ದ
ಇಬ್ಬನಿಯ ಹನಿಯಂತೆ
ಕಾಡುತ್ತಾವ ನೆನಪುಗಳು…!!

ಹಾಡುತ್ತಾವ ನೆನಪುಗಳು….
ಮನದ ಮೂಲೆಯಲ್ಲಿ ನಿಂದು
ವಿರಹದ ಉರಿಯಲಿ ಬೆಂದು
ಮಾತುಮೌನ ಜೊತೆಯಲೇ ತಂದು
ಹಾಡುತ್ತಾವ ನೆನಪುಗಳು….!!

ಬೇಡುತ್ತಾವ ನೆನಪುಗಳು…
ಜೋಡಿ ಕಣ್ಣ ರೆಪ್ಪೆಯಂತೆ
ಒಂದೇ ನೆಟ್ಟ ದೃಷ್ಟಿಯಂತೆ
ಜೊತೆ ಜೊತೆಗೆ ಕೂಡಿ ನಲಿವ
ತೇಲಿಹೋದ ಕಾಲದ ಕುರುಹ
ಬೇಡುತ್ತಾವ ನೆನಪುಗಳು….!!

ಮಲಗುತ್ತಾವ ನೆನಪುಗಳು
ಮಧುರ ಮಿಲನದ ಮತ್ತಿನಲ್ಲಿ
ಹೊತ್ತಲ್ಲದ ಹೊತ್ತಿನಲ್ಲಿ
ನಿನ್ನ ತೋಳ ಬಂಧಿಯಾಗಿ
ಗೆಜ್ಜೆದನಿಯ ಲಾಲಿಗೆ ಬಿಕ್ಕುತ್ತಾ
ಮಲಗುತ್ತಾವ ನೆನಪುಗಳು….!!

-ಪಾರ್ವತಿ ಸಪ್ನ, ಬೆಂಗಳೂರು
*****

Leave a Reply

Your email address will not be published. Required fields are marked *