ಪ್ರೊ. ಬಿ. ಕೃಷ್ಣಪ್ಪ ಸ್ಮಾರಕದ ರೂವಾರಿ ಹನಗವಾಡಿ ರುದ್ರಪ್ಪ -ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಈ ಬಾರಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪ್ರಶಸ್ತಿಗೆ ಉತ್ತಮ ಆಯ್ಕೆ ಮಾಡಿದೆ. ಈ ಹದಿನೈದು ಮಂದಿಯಲ್ಲಿ ರುದ್ರಪ್ಪ ಹನಗವಾಡಿ ಅವರ ಒಂದು ಸೇವೆಯನ್ನು ಸ್ಮರಿಸಬೇಕಿದೆ.

ರುದ್ರಪ್ಪ ನಿವೃತ್ತ ಕೆ.ಎ.ಎಸ್‌ ಅಧಿಕಾರಿ. ಬಿ.ಕೃಷ್ಣಪ್ಪ ಅವರ ಸಮೀಪದ ಒಡನಾಡಿಯಾಗಿದ್ದವರು. ಸಾಗರ, ಶಿವಮೊಗ್ಗದಲ್ಲಿ ಲೆಕ್ಚರರ್‌ ಅಗಿ ಜೊತೆಯಲ್ಲಿ ಕೆಲಸ ಮಾಡಿದ್ದಾರೆ. ಕೃಷ್ಣಪ್ಪ ಹರಿಹದವರಾದರೆ ರುದ್ರಪ್ಪ ಅದೇ ತಾಲ್ಲೂಕಿನ ಹನಗವಾಡಿ ಗ್ರಾಮದವರು. ಕೃಷ್ಣಪ್ಪ ಅವರ ಜೊತೆ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಪರೋಕ್ಷವಾಗಿ ನೆರವಾಗಿರುವ ಹಲವಾರು ಘಟನೆಗಳಿವೆ.

ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧಿಸಲು ಕೃಷ್ಣಪ್ಪ ಅವರು ಹೋರಾಟ ಮಾಡಿದಾಗ ರುದ್ರಪ್ಪ ಅಲ್ಲಿನ ತಹಸಿಲ್ದಾರ್.‌ ಕಾನೂನು ಪ್ರಕಾರವೇ ಕೃಷ್ಣಪ್ಪ ಅವರ ಹೋರಾಟಕ್ಕೆ ಪೂರಕವಾಗಿ ಕೆಲಸ ಮಾಡಿದರು. ಆದರೆ ಅಂದು ಸಂಘಪರಿವಾರದ ಸಂಚಿನಿಂದ ಗಲಭೆ ಆದದ್ದು ಇತಿಹಾಸ. ಕೊನೆಗೆ ಬೆತ್ತಲೆಸೇವೆ ನಿಷೇಧಗೊಂಡ್ಡದ್ದು ಇತಿಹಾಸ.

ಕೃಷ್ಣಪ್ಪ ಅವರು ೧೯೯೭ರ ಏಪ್ರಿಲ್‌ ೩೦ರಂದು ಗದಗದಲ್ಲಿ ಹೃದಯಾಘಾತದಿಂದ ನಿಧನರಾದರು. ಅಂದು ರಾತ್ರಿಯೇ ಕೃಷ್ಣಪ್ಪ ಅವರ ಕುಟುಂಬವನ್ನು ಬೆಂಗಳೂರಿನಿಂದ ಕರೆದುಕೊಂಡು ಹೋಗಿ ಮರುದಿನ ಕೃಷ್ಣಪ್ಪ ಅವರ ಮೃತದೇಹವನ್ನು ಹರಿಹರಕ್ಕೆ ತರುತ್ತಾರೆ.

ಕೃಷ್ಣಪ್ಪ ಅವರ ಅಂತ್ಯಕ್ರಿಯೆಯನ್ನು ಎಲ್ಲಿ ನಡೆಸುವುದು ಎಂದು ಅವರ ಸಹೋದರರನ್ನು ವಿಚಾರಿಸುತ್ತಾರೆ. ಆಗ ಅವರು ನಮ್ಮ ಊರಿನ ಸಂಪ್ರದಾಯದಂತೆ ತುಂಗಭದ್ರಾ ನದಿಯ ದಡದಲ್ಲಿ ಹೂಳುವುದಾಗಿ ಹೇಳುತ್ತಾರೆ. ಆಗ ಚಿಂತಾಕ್ರಾಂತರಾದ ರುದ್ರಪ್ಪ ರಾತ್ರೋರಾತ್ರಿ ತಮ್ಮ ಊರು ಹನಗವಾಡಿಗೆ ಬಂದು ತಮ್ಮ ಅಣ್ಣನಿಗೆ ಕೃಷ್ಣಪ್ಪ ಅವರ ಸಾವಿನ ಸುದ್ದಿ ತಿಳಿಸುತ್ತಾರೆ. ಕೃಷ್ಣಪ್ಪನವರ ಅಂತ್ಯಕ್ರಿಯೆಯನ್ನು ನದಿದಡದಲ್ಲಿ ಮಾಡುತ್ತಾರಂತೆ. ಆದ್ದರಿಂದ ನೀನು ಹೆದ್ದಾರಿ ಪಕ್ಕದಲ್ಲಿರುವ ಒಂದು ಎಕರೆ ಜಮೀನು ಬಿಟ್ಟುಕೊಡು. ನಿನಗೆ ನನ್ನ ಜಮೀನು ಕೊಡುತ್ತೇನೆ ಎಂದು ಒಪ್ಪಿಸುತ್ತಾರೆ.

ಸರಿ ಬೆಳಿಗ್ಗೆ ಹರಿಹರಕ್ಕೆ ಬಂದು ಕೃಷ್ಣಪ್ಪ ಅವರ ಸಹೋದರರ ಜೊತೆ ಮಾತನಾಡಿ ತಮ್ಮ ಜಮೀನಿನಲ್ಲಿ ಮಣ್ಣು ಮಾಡೋಣ ಎಂದು ಒಪ್ಪಿಸುತ್ತಾರೆ. ಅಂತ್ಯಕ್ರಿಯೆಗೆ ಮೃತದೇಹವನ್ನು ಹನಗವಾಡಿಗೆ ತರುವಾಗ ಕೆಲವು ಸ್ಥಳೀಯ ಯುವಕರು, ಕೃಷ್ಣಪ್ಪ ಅವರ ಬಾಡಿಯನ್ನು ನೀವು ಹೈಜಾಕ್‌ ಮಾಡುತ್ತಿದ್ದೀರಿ ಎಂದು ವಿರೋಧಿಸಿದರಂತೆ.

ಆದರೆ ಈ ವಿರೋಧವನ್ನು ಲೆಕ್ಕಿಸದೆ ರುದ್ರಪ್ಪ, ಕೃಷ್ಣಪ್ಪ ಅವರ ಮೃಹದೇಹವನ್ನು ತಮ್ಮ ಜಮೀನಿಗೆ ತಂದು ಅಂತ್ಯಕ್ರಿಯೆ ನೆರವೇರಿಸುತ್ತಾರೆ. ನಂತರ ಕೃಷ್ಣಪ್ಪ ಅವರ ಹೆಸರಿನಲ್ಲಿ ಟ್ರಸ್ಟ್‌ ಮಾಡಿ ಅವರ ಬದುಕು- ಬರಹ ಮತ್ತು ಭಾಷಣದ ಹಲವಾರು ಕೃತಿಗಳನ್ನು ಕೃಷ್ಣಪ್ಪ ಅವರ ಶ್ರೀಮತಿ ಇಂದಿರಾ ಅವರ ಸಹಕಾರದಿಂದ ಪ್ರಕಟಿಸಿದ್ದಾರೆ.

ನಂತರ ಟ್ರಸ್ಟ್‌ ಮೂಲಕ ಸ್ವಂತ ಹಣವನ್ನು ಹಾಕಿ ಸರ್ಕಾರದ ನೆರವಿನಿಂದ ಹತ್ತನ್ನೆರಡು ವರ್ಷದ ಹಿಂದೆ ಕೃಷ್ಣಪ್ಪ ಸ್ಮಾರಕ ಭವನ (ಮೈತ್ರಿವನ) ಕಟ್ಟಿಸಿದ್ದಾರೆ. ಅಲ್ಲಿ ಸಭೆ ಸಮಾರಂಭ ಮತ್ತು ಕೃಷ್ಣಪ್ಪ ಅವರ ಸ್ಮರಣೆ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ರುದ್ರಪ್ಪ ಅವರು ಕೃಷ್ಣಪ್ಪ ಅವರ ಇದು ತಮ್ಮ ಮನೆಯ ಸಾವು ಎಂದು ತಿಳಿದು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡದಿದ್ದರೆ ನದಿ ದಡದಲ್ಲಿ ಅವರ ಅವಶೇಷ ಗುರುತು ಸಿಗದಾಗದಿತ್ತು.

ದಲಿತ ಯುವಕರು ವಿಶೇಷವಾಗಿ ಈ ಜಾಗದಿಂದ ಒಳ ಮೀಸಲಾತಿ ಹೋರಾಟ ಆರಂಬಿಸಲು ರುದ್ರಪ್ಪ ಮುಕ್ತ ಅವಕಾಶ ತೆರೆದಿಟ್ಟಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಚಲವಾದಿ ಕುಟುಂಬದ ರುದ್ರಪ್ಪ ಅವರನ್ನಾಗಲಿ ಅಥವಾ ಕೃಷ್ಣಪ್ಪ ಅವರ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರನ್ನಾಗಲಿ ಈ ಶ್ಲಾಘನೀಯ ಕಾರ್ಯಕ್ಕೆ ಈ ಹೋರಾಟಗಾರರು ಎಂದೂ ಸ್ಮರಿಸಿದ್ದು ಕಂಡಿಲ್ಲ!!

ಈ ಘಟನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕವಾದರೂ ಜನರ ಗಮನಕ್ಕೆ ತರಬೇಕೆಂದು ಮಿತ್ರರೊಬ್ಬರು ಒತ್ತಾಯಿಸಿದ್ದರಿಂದ ಬರೆಯಬೇಕಾಯಿತು. ರುದ್ರಪ್ಪ ಅವರು ಬಿ. ಬಸವಲಿಂಗಪ್ಪ, ಕೆ. ಎಚ್. ರಂಗನಾಥ್ ಮತ್ತು ಪ್ರೊ ಸಿ. ಪಾರ್ವತಮ್ಮ ಅವರ ಹತ್ತಿರದ ಸಂಬಂದಿ.


-ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು