ಕತೆ, ಕವಿತೆ, ಕಾದಂಬರಿ, ನಾಟಕ ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸಿ ಹೆಚ್ಚುಹೆಚ್ಚು ಕೃತಿಗಳನ್ನು ಪ್ರಕಟಿಸಿ ಜನಪ್ರಿಯರಾಗಿ, ಸಾರಸ್ವತ ಲೋಕ ಗುರುತಿಸಿದ ಮೇಲೆ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗೋದು ಸಹಜ! ಆದರೆ ಕೇವಲ ಬೆರಳೆಣಿಕೆ (ಐದೇ ಐದು) ಕಥೆಗಳ ಒಂದೇ ಒಂದು-ಮೊಟ್ಟಮೊದಲನೆಯ-ಸಣ್ಣಕಥಾ ಸಂಕಲನಕ್ಕಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದವರು ಯಾರಾದ್ರೂ ಇದ್ರೆ ಅವರು ಖಂಡಿತವಾಗಿ ನಮ್ಮ ರಾಜಶೇಖರ ನೀರ ಮಾನ್ವಿಯವರು ಅನ್ನೋದು ವಿಚಿತ್ರವಾದರೂ ಸತ್ಯ!.
ಅತ್ತ ಮಲೆನಾಡ ಪ್ರಕೃತಿ, ಸಿರಿ ಭಾಷೆಯ ನಾಜೂಕಿಗೆ ಮೊದಲ ಮಣೆಯ ಗಮ್ಮತ್ತು! ಇತ್ತ ಉತ್ತರದವರ ಗಂಡು ಭಾಷೆಯ ಗೈರತ್ತು!! ಇವುಗಳ ನಡುವೆ ಬಯಲು ಸೀಮೆಯ ಬರಹ-ಭಾಷೆಗಳ “ಗತಿ”ಯ ಬರಿಬೆತ್ತಲ ಬಯಲ ತಾಕತ್ತು!!!. ಅದರಾಚೆಗೂ ಸತ್ವ ಉಂಟು, ಸೊಗಡುಂಟು, ಕಾಣ್ಕೆಗಳುಂಟು ಎಂದು ಸಾಕ್ಷೀಕರಿಸಿದ ಕೆಲವೇ ಬರಹಗಾರರಲ್ಲಿ ರಾಜಶೇಖರ ನೀರಮಾನ್ವಿ ಬಹುಮುಖ್ಯರು!
೧೯೬೬ರಲ್ಲಿ ಅವರ ಪ್ರಥಮ ಸಣ್ಣಕತೆ ‘ವೃತ್ತ’ ಪ್ರಕಟವಾಯ್ತು. ಸಾಕು ನಾಯಿಯೊಂದರ ಸಾವು ಅದರ ಒಡೆಯನನ್ನು ವಿಪರೀತವಾಗಿ ಕಾಡುವ ಹಿನ್ನೆಲೆಯಲ್ಲಿ ರಚಿತ ಇದರ ಕಥಾವಸ್ತುವೇ ಅತ್ಯಂತ ವಿಭಿನ್ನ-ವಿಚಿತ್ರ!. ಅಲ್ಲಿವರೆಗೆ ಎಷ್ಟೋ ಸಾಕಿದ ನಾಯಿಗಳು ಸತ್ತಿದ್ದರೂ ಯಾವ ನಾಯಿಯನ್ನೂ ಇದರಷ್ಟು ಹಚ್ಚಿಕೊಂಡಿರದಿದ್ದ ಶಂಕರಪ್ಪಗೌಡರ ದುಃಖ-ಮಾನಸಿಕ ತುಮುಲ ಓದುಗರನ್ನು ನಿಬ್ಬೆರಗಾಗಿಸುತ್ತವೆ!. ಎಷ್ಟೋ ‘ದಣಿ’ಗಳು ಕೆಲಸ ಮಾಡುವ ಕೂಲಿಯಾಳುಗಳನ್ನೇ ಮಾನವೀಯ ದೃಷ್ಟಿಯಿಂದ ನೋಡೋದಿಲ್ಲ! ಅಂತಹದರಲ್ಲಿ ಒಂದು ಸಾಕು ನಾಯಿಯ ಸಾವನ್ನು ಗಂಭೀರವಾಗಿ ಪರಿಗಣಿಸಿದ ಗೌಡರ ಮನುಷ್ಯ ಪ್ರೀತಿಗೂ ಮಿಗಿಲಾದ ಪ್ರಾಣಿಪ್ರೀತಿ(ಭೂತದಯೆ) ಆಶ್ಚರ್ಯ ಮೂಡಿಸುತ್ತದೆ. ಈ ಮೊದಲ ಕತೆಯಿಂದಲೇ ಹೆಸರಾದ ಡಾ.ರಾಜಶೇಖರ ನೀರಮಾನ್ವಿಯವರು-೧೯೭೩ರ ಹೊತ್ತಿಗೆ ಇಡೀ ರಾಷ್ಟ್ರಮಟ್ಟದಲ್ಲಿಯೇ ಪ್ರಸಿದ್ಧಿ ಪಡೆದರು.
೧೯೭೮ರಲ್ಲಿ ಐದೇ ಐದು ಸಣ್ಣಕಥೆಗಳ “ಹಂಗಿನರಮನೆಯ ಹೊರಗೆ” ಮೊದಲ ಕಥಾಸಂಕಲನ ಹೊರಬಂದು, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜಶೇಖರ ನೀರಮಾನ್ವಿಯವರು ಮತ್ತೇ ಹನ್ನೆರಡು ವರ್ಷ ಸಣ್ಣ ಕಥೆಗಳನ್ನೇಕೆ ಬರೆಯಲಿಲ್ಲ?! ಕಥಾ ಸಂಕಲನವನ್ನೇಕೆ ಹೊರತರಲಿಲ್ಲನ್ನೋದು-ಸೋಜಿಗ?!. ಈ ಕುರಿತು ಪ್ರತಿಷ್ಠಿತ ಪ್ರಖ್ಯಾತ ಬಳ್ಳಾರಿಯ ಲೋಹಿಯಾ ಪ್ರಕಾಶನದ ರೂವಾರಿ ಸಿ.ಚೆನ್ನಬಸವಣ್ಣನವರು ಹೇಳುವ ಕತೆಯೂ ರಸರೋಚಕ!.
೧೯೭೩ರಲ್ಲಿ ವೀರಶೈವ ಕಾಲೇಜು ಭೂವಿಜ್ಞಾನ ಉಪನ್ಯಾಸಕರಾಗಿ ಬಳ್ಳಾರಿಗೆ ಬಂದ ಪ್ರೊ. ರಾಜಶೇಖರ ನೀರಮಾನ್ವಿ ಯವರನ್ನು ಮುಖತಃ ನೊಡಿರದಿದ್ದರೂ ಮೈಸೂರು ಬ್ಯಾಂಕ್(ಎಸ್.ಬಿ.ಎಂ ) ಉದ್ಯೋಗಿಯಾಗಿದ್ದ ಸಿ. ಚೆನ್ನಬಸವಣ್ಣನವರು ‘ಪ್ರಜಾ ವಾಣಿ’, ಚಂಪಾರ ‘ಸಂಕ್ರಮಣ’, ಅಡಿಗರ‘ಸಾಕ್ಷಿ’ಸಾಹಿತ್ಯಿಕ ಪತ್ರಿಕೆಯಲ್ಲಿ, ‘ಹಂಗಿನರಮನೆಯ ಹೊರಗೆ’ ಮೊದಲ ಕಥಾ ಸಂಕಲನದ ಕತೆಗಳನ್ನು ಓದಿ ಅವರ ಬಗ್ಗೆ ಗೌರವಾಭಿಮಾನ ಬೆಳೆಸಿಕೊಂಡಿದ್ದರು. ಮೊದಲನೆ ಭೇಟಿಯನ್ನು ಸ್ವಾರಸ್ಯಕರ ವಾಗಿ ಹಾಸ್ಯಮಯವಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ :
“ಅವರನ್ನು ನೋಡಿದ ಕೂಡಲೇ ಭೂಗರ್ಭದಿಂದೆದ್ದು ಬಂದ, ದಪ್ಪ ಕಣ್ಣಡಕದ(‘ಕನ್ನಡಕ’ ಶಬ್ದ ತಪ್ಪು) ಅಪ್ಪಟ ಕಪ್ಪುಶಿಲಾವಿಗ್ರಹವನ್ನು ನೋಡಿದ ಹಾಗೆ ಭಾಸವಾಗಿ, ಅತ್ಯಂತ ನೀರಸವಾಗಿ ಕಂಡುಬಂದ ಇವ್ರೇನಾ ಇಂಥ ಉತ್ತಮ ಕತೆಗಳನ್ನು ಬರೆದವರಂತಾ ಆಶ್ಚರ್ಯವಾಯಿತು! ಆದರೆ ಮುಂದೆ ಕೆಲದಿನಗಳಲ್ಲಿ ಗಾಢವಾದ ಸ್ನೇಹ ಆತ್ಮೀಯತೆ-ಆಪ್ತತೆಯಾಗಿ ಮಾರ್ಪಟ್ಟು ಸಮಾನ ವಿಚಾರಧಾರೆ ನಮ್ಮನ್ನು ಹತ್ತಿರ ತಂದಿತು”ಎನ್ನುತ್ತಾರೆ!.
ರಾಜಶೇಖರ ನೀರಮಾನ್ವಿಯವರ “ಹಂಗಿನರಮನೆಯ ಹೊರಗೆ” ಪ್ರಥಮ ಕಥಾಸಂಕಲನ ಪ್ರಕಟಗೊಂಡ ೧೨ ವರ್ಷಗಳ ಬಳಿಕ-“ಕರ್ಪೂರದ ಕಾಯದಲ್ಲಿ”ದ್ವಿತೀಯ ಕಥಾಸಂಕಲನ ಪ್ರಕಟನೆಗಾಗಿಯೇ “ಲೋಹಿಯಾ ಪ್ರಕಾಶನ”ವು ಅಸ್ತಿತ್ವಕ್ಕೆ ಬಂದುದನ್ನು ಚೆನ್ನಬಸವಣ್ಣನವರು ನೆನಪಿಸಿಕೊಳ್ಳುವುದು ಹೀಗೆ :
“ನೀರಮಾನ್ವಿಯವರಂಥ ಶ್ರೇಷ್ಠ ಕತೆಗಾರರಿಂದ ಮತ್ತೇ ಯಾಕೆ ಕತೆಗಳು ಬರುತ್ತಿಲ್ಲಂತ ಬಹಳಷ್ಟು ಜನ ನನ್ನನ್ನು ಕೇಳುತ್ತಿದ್ದರು!. ನಾನು ನೀರಮಾನ್ವಿಯವರಿಗೆ ಕಥೆ ಬರೆಯಲು ಒತ್ತಾಯಿಸಲಾರಂಭಿಸಿದೆ. ಒಮ್ಮೆ ಬಳ್ಳಾರಿಯ ನಟರಾಜ ಕಾಂಪ್ಲೆಕ್ಸಲ್ಲಿ ಚಹಾ ಕುಡೀತಾ ಕುಂತಾಗ ‘ವರ್ಷಾನುಗಟ್ಲೆ ಇಡೀ ನಾಡು ಸುತ್ತಿದರೂ ಯಾವ ಪ್ರಕಾಶಕರೂ ಪ್ರಕಟಿಸಲು ಒಪ್ಪಲಿಲ್ಲ! ಸುಮಾರು ೧೨ವರ್ಷಗಳ ಬಳಿಕ ನೀವು ಒತ್ತಾಯಿಸ್ತಿರೋದ್ರಿಂದ ಕೊಡ್ತಿದೀನಿ ಅಂತಾ ರಪ್ಪನೇ ಒಂದು ಕಟ್ಟನ್ನು ನಮ್ಮ ಮುಂದೆ ಬೀಸಿ ಎಸೆದರು!. “ಗಂಭೀರ ಯೋಚನೆ ಮಾಡಿ ಇದನ್ನು ನಾವೇ ಯಾಕೆ ಪ್ರಕಟಿಸಬಾರದು?” ನನ್ನ ಪ್ರಶ್ನೆಗೆ-“ನಮಗ್ಯಾರಿಗೂ ಅನುಭವವಿಲ್ಲವಲ್ಲ!. ಪ್ರಕಾಶನವೆಲ್ಲಿದೆ?”ಎಂಬ ಮರುಪ್ರಶ್ನೆ!. ನಾವೆಲ್ಲರೂ ಲೋಹಿಯಾರಿಂದ ಪ್ರೇರಿತ ರಾಗಿರೋದ್ರಿಂದ ಲೋಹಿಯಾರ ಹೆಸರಿಟ್ಟುಕೊಂಡೇ ಪ್ರಾರಂಭಿಸೋಣವೆಂದು ನಿರ್ಧರಿಸಿದೆವು.
“ಅಂತೂ ಹೊಗೆಯಾಡೊ ಚಹಾ ಬಟ್ಟಲು! ಪ್ರಕಾಶನವೊಂದರ ಹುಟ್ಟಿಗೆ ಆದೀತು ತೊಟ್ಟಿಲು!!”-ಅಂತಾ ನಾವ್ಯಾರೂ ಅಂದ್ಕೊಂಡಿರಲಿಲ್ಲ!. ಹೀಗೆ ರಾಜಶೇಖರ ನೀರಮಾನ್ವಿಯವರ “ಕರ್ಪೂರದ ಕಾಯದಲ್ಲಿ”ಎರಡನೆ ಕಥಾ ಸಂಕಲನವನ್ನು ಚೊಚ್ಚಲು ಕೃತಿಯಾಗಿ ಬೆಳಕಿಗೆ ತರುವ ಮೂಲಕ ೧೯೯೦ರಲ್ಲಿ-“ಲೋಹಿಯಾ ಪ್ರಕಾಶನ”ಅಸ್ತಿತ್ವಕ್ಕೆ ಬಂತು!.
ಚಂದ್ರಕಾಂತ ವಡ್ಡು-“ನಾರೀಹಳ್ಳದ ದಂಡೆಯಲ್ಲಿ”, ಬೂದಗುಪ್ಪ ಪ್ರಹ್ಲಾದರೆಡ್ಡಿ -“ಹಟವಾದಿ ಮತ್ತು ಹುಡುಗಿ”, ಕಲಿಗಣನಾಥ ಗುಡದೂರು-“ತೂತುಬೊಟ್ಟು”ಇನ್ನೂ ಅನೇಕಾನೇಕ ಉದಯೋನ್ಮುಖ ಕತೆಗಾರರ ಮೊಟ್ಟಮೊದಲ ಕಥಾ ಸಂಕಲನಗಳನ್ನು ಪ್ರಕಟಿಸಿದ ಚೆನ್ನಬಸವಣ್ಣನವರು ಲೋಹಿಯಾ ಪ್ರಕಾಶನದಿಂದ-ಮುದೇನೂರು ಸಂಗಣ್ಣ, ಸರಜೂ ಕಾಟ್ಕರ್, ಬಸವರಾಜ ಸಾದರ, ಬೆಸಗರಹಳ್ಳಿ ರಾಮಣ್ಣ, ಚೆನ್ನವೀರ ಕಣವಿ, ಪಾಟೀಲ ಪುಟ್ಟಪ್ಪ, ಎಂ.ಎಂ.ಕಲಬುರ್ಗಿ, ಕೋ. ಚೆನ್ನಬಸಪ್ಪ-ಇನ್ನೂ ಮುಂತಾದ ಗಣ್ಯ ಸಾಹಿತಿಗಳ-ಕವಿತೆ, ಕತೆ, ಕಾದಂಬರಿ, ಪ್ರವಾಸ ಕಥನ, ವೈಚಾರಿಕ ಮತ್ತು ಇತರ ವಿಭಿನ್ನ, ವೈವಿಧ್ಯಮಯ, ವೈಶಿಷ್ಟ್ಯಪೂರ್ಣ-200ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
-ಟಿ.ಕೆ. ಗಂಗಾಧರ ಪತ್ತಾರ್, ಹಿರಿಯ ಸಾಹಿತಿ, ಬಳ್ಳಾರಿ