ಯುವ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ‌ ಭಾರತ ನಿರ್ಮಾಣ ಸಾಧ್ಯ – ಪ್ರೊ. ಬಿ.ಕೆ ರವಿ

ಕೊಪ್ಪಳ,ಆ.12 : ಯುವಕರು ದೇಶದ ಭವಿಷ್ಯದ ಶಕ್ತಿ. ಅವರ ಶಕ್ತಿಯನ್ನು ಸಮಾಜಮುಖಿ ದಾರಿಯಲ್ಲಿ ಬಳಸಿದಾಗಲೇ ನಶಾ ಮುಕ್ತ, ಅಭಿವೃದ್ಧಿಶೀಲ ಭಾರತದ ಕನಸು ನನಸಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.
ಯಲಬುರ್ಗಾ ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಆಂದೋಲನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಇಂದಿನ ಯುವ ಪೀಳಿಗೆಯಲ್ಲಿರುವ ಚುರುಕು, ಬುದ್ಧಿಶಕ್ತಿ, ಸೃಜನಶೀಲತೆ ಇವೆಲ್ಲವನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಆದರೆ ಮದ್ಯ, ಮಾದಕ ಪದಾರ್ಥಗಳು ಮತ್ತು ತಂಬಾಕು ಉತ್ಪನ್ನಗಳಂತಹ ವ್ಯಸನಗಳು ಅವರ ಭವಿಷ್ಯವನ್ನು ಹಾಳು ಮಾಡಬಲ್ಲದು. ಅದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ನಶಾ ಮುಕ್ತ ಭಾರತದ ಕನಸು ಕೇವಲ ಸರ್ಕಾರದ ಯೋಜನೆಯಲ್ಲ, ಅದು ಜನಜಾಗೃತಿ ಚಳವಳಿಯಾಗಿದೆ. ವಿದ್ಯಾರ್ಥಿಗಳು ಈ ಸಂದೇಶವನ್ನು ತಮ್ಮ ಮನೆ, ಬೀದಿ, ಹಾಗೂ ಗ್ರಾಮಗಳಿಗೆ ಕೊಂಡೊಯ್ಯಬೇಕು. ಆರೋಗ್ಯಕರ ಜೀವನಶೈಲಿ, ಉತ್ತಮ ಶಿಕ್ಷಣ ಮತ್ತು ಸಾಮಾಜಿಕ ಹೊಣೆಗಾರಿಕೆ ಇವೇ ನಿಜವಾದ ಯುವಶಕ್ತಿಯ ಗುರುತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಛತ್ರದ, ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.