ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ…… ಲಘು ಬರಹ: ಸಿದ್ಧರಾಮ ಕೂಡ್ಲಿಗಿ

ಸಕ್ಕರೆ ಕಾಯಿಲೆಯೂ….. ಹಳ್ಳಿಯ ಚಹಾವೂ……

ಇತ್ತೀಚೆಗೆ ನನ್ನ ಮಗಳು ಅವಳು ಕೆಲಸ ಮಾಡುವ ಕಂಪನಿಯ ವತಿಯಿಂದ ಹೆಚ್ಚಿನ ತರಬೇತಿಗಾಗಿ ಗ್ರೀಸ್ ದೇಶಕ್ಕೆ ಹೋಗಿಬಂದಳು. ಅಲ್ಲಿಯ ಜನಜೀವನ, ಆಹಾರ ಪದ್ಧತಿಯ ಬಗ್ಗೆ ಹೇಳುತ್ತಾ “ಅಲ್ಲಿ ನಾವು ಕಾಫಿಗೆ ಸಕ್ಕರೆ ಹಾಕಿಕೊಳ್ಳೋದು ನೋಡಿ ಅಲ್ಲಿಯ ಜನ ಹೌಹಾರಿದರು ಅಪ್ಪಾಜಿ… ಅವರು ಎಳ್ಳಷ್ಟೂ ಸಕ್ಕರೆ ಬಳಸೋದೇ ಇಲ್ಲ. ಪೂರ್ತಿ ಸಪ್ಪಗೇ ಇರುತ್ತದೆ” ಎಂದಳು. ಗ್ರೀಸ್ ದೇಶದ ಜನರೇನಾದರೂ ಸ್ವಲ್ಪ ನಮ್ಮ ಉತ್ತರ ಕರ್ನಾಟಕದ ಹಳ್ಳಿಯ ಕ್ಯಾಂಟೀನ್ ಗಳಿಗೆ ಹೋಗಿ ಚಹಾ ಕುಡಿದರೆ ಎದೆ ಒಡೆದುಕೊಳ್ತಾರೋ ಏನೋ.
ನಾನು ಸಾಕಷ್ಟು ಹಳ್ಳಿಗಳ ಮನೆಯ ಚಹಾ ಕುಡಿದಿದೀನಿ, ಹಾಲು, ಚಹಾಪುಡಿಗಿಂತಲೂ ಸಕ್ಕರೆಯೇ ಮುಂದು. ಅತ್ಯಂತ ಸಿಹಿಯಾದ ಚಹಾ ಕುಡಿಯದಿದ್ದರೆ ನಮ್ಮ ಮಂದಿಗೆ ಅದು ಚಹಾ ಅನಿಸಿಕೊಳ್ಳಲಿಕ್ಕೇ ಯೋಗ್ಯವಲ್ಲದ್ದು.

ನೀವು ನಮ್ಮ ಉತ್ತರ ಕರ್ನಾಟಕದ ಯಾವುದೇ ಗ್ರಾಮೀಣ ಭಾಗದ ತಟ್ಟಿ ಗುಡಿಸಲು ರೀತಿ ಇರುವ ಕ್ಯಾಂಟೀನ್ ಗೆ ಹೋಗಿ ಚಹಾ ಕುಡಿಯಿರಿ, ಸಿಹಿ ಅಂಶದಿಂದ ನಿಮ್ಮ ತುಟಿಗಳು ಒಂದಕ್ಕೊಂದು ಅಂಟಿಕೊಳ್ಳದಿದ್ದರೆ ಕೇಳಿ. ಅಷ್ಟು ಸಕ್ಕರೆಯನ್ನು ಚಹಾಕ್ಕೆ ಬಳಸುತ್ತಾರೆ.
ನಗರ ಪ್ರದೇಶಗಳಲ್ಲಿ ನಾಲ್ಕು ಹರಳು ಸಕ್ಕರೆಯನ್ನು ಚಹಾಕ್ಕೆ ಹಾಕಿದರೂ ಗಾಬರಿಯಾಗುವ ಜನರಿದ್ದಾರೆ. ಆದರೆ ನಮ್ಮ ಭಾಗಕ್ಕೆ ಬಂದು ನೋಡಿ ಎಷ್ಟು ಸಕ್ಕರೆ ಹಾಕುತ್ತಾರೆಂದರೆ ಚಹಾಪುಡಿ ಹಾಕದೇ ಇದ್ದರೆ ಬಹುಶ: ಅದರಲ್ಲಿಯೇ ಉಂಡೆ ಕಟ್ಟಬಹುದೇನೋ.
ವೈದ್ಯರೋ ಹೆಚ್ಚು ಸಿಹಿ ತಿಂಡಿ, ಸಕ್ಕರೆ ತಿನ್ನಬೇಡಿ ಎನ್ನುತ್ತಾರೆ. ನಮ್ಮ ಭಾಗದ ಹಳ್ಳಿಯ ಜನರಿಗೋ ಸಿಹಿ ಅಂದರೆ ತುಂಬಾ ಪ್ರೀತಿ. ಸಕ್ಕರೆ ಕಾಯಿಲೆಯ ಮುಖಕ್ಕೆ ಹೊಡೆಯುವ ಹಾಗೆ ಸಕ್ಕರೆ, ಸಿಹಿ ತಿಂಡಿಗಳನ್ನು ಬಳಸುತ್ತಾರೆ. ಮದುವೆ ಸಮಾರಂಭಗಳಲ್ಲಿ ಬಳಸುವ ಬೂಂದಿ ಲಾಡು, ಗೋಧಿ ಹುಗ್ಗಿ, ಇತರೆ ಸಿಹಿ ಪದಾರ್ಥಗಳನ್ನು ಉಂಡು ನೋಡಿ, ಸಕ್ಕರೆಯನ್ನು ಎಷ್ಟು ಬಳಸುತ್ತಾರೆ, ಹೇಗೆ ಊಟ ಮಾಡುತ್ತಾರೆ ಎಂಬುದು ನಿಮಗೇ ಗೊತ್ತಾಗುತ್ತೆ. ಬೇಸಗೆಯಲ್ಲಿ ಅದೆಂಥ ರಣಬಿಸಿಲು ಇದ್ದರೂ ಸುಡುಸುಡುವ ಚಹಾ ಬೇಕು ಅದೂ ಸಕ್ಕರೆಯ ಅಂಶ ಜಾಸ್ತಿ ಇರಬೇಕು.
ಹಳ್ಳಿಯ ಚಹಾ ಹೋಟೆಲ್ ಗಳಲ್ಲಿ ನೋಡಬೇಕು ನೀವು. ಚಹಾ ಅಂಗಡಿಯವನು ಎಷ್ಟೇ ಸಿಹಿಯಾದ ಚಹಾ ಮಾಡಿದ್ದರೂ “ಏನ್ ಚಹಾ ಮಾಡೀಲೇ, ಸಕ್ಕರೀನ ಆಗಿಲ್ಲ, ಒಂದಷ್ಟ್ ಸಕ್ಕರಿ ಹಾಕು” ಎಂದು ಮೇಲೆ ಸಕ್ಕರೆ ಹಾಕಿಸಿಕೊಂಡು ಕುಡಿಯುವವರ ದೃಶ್ಯ ಸಾಮಾನ್ಯ.

ನನ್ನ ಮಗಳು ಚಿಕ್ಕವಳಿದ್ದಾಗ ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. “ಅಪ್ಪಾಜಿಯ ಮೇಲೆ ಪ್ರೀತಿ” ಅಂತ ಅವಳ ಪ್ರತಿ ಅಡುಗೆಯ ರುಚಿಗೂ ನಾನು ಬಲಿಪಶುವಾಗಿದ್ದೆ. “ಅಪ್ಪಾಜಿ ಚಾ ಮಾಡ್ತೀನಿ” ಎಂದಳು. ಸರಿ ಎಂದೆ. ಸ್ವಲ್ಪ ಹೊತ್ತಿಗೆ ಚಹಾ ಮಾಡಿಕೊಂಡು ಬಂದಳು. ಮೊದಲಿಗೆ ನನಗೆ ಕೊಟ್ಟು ಹೇಗಾಗಿದೆ ? ಎಂದು ಎದುರಿಗೆ ಕುತೂಹಲದಿಂದ ನಿಂತಳು. ನಾನು ಒಂದು ಗುಟುಕು ಕುಡಿದು ತೆಪ್ಪಗೆ ಮುಖ ಮಾಡಿಕೊಂಡು ಸುಮ್ಮನೆ ಕುಳಿತೆ. “ಏನಾಯ್ತು ? ಅಪ್ಪಾಜಿ” ಎಂದಳು. ನಾನು ತಲೆ ಅಡ್ಡ ಅಲ್ಲಾಡಿಸಿದೆ. “ಹೇಳ್ರಿ ಹೇಳ್ರಿ ಚಾ ಚೊಲೋ ಆಗಿಲ್ಲಾ ?” ಎಂದು ಮತ್ತೆ ಮತ್ತೆ ಕೇಳಿದಳು. ” ತಡೀಯಮಾ, ತುಟಿ ಅಂಟ್ಕೋಂಡಾವ ” ಎಂದೆ. ಮಗಳು “ಅಯ್ಯೋ ಬಹುಶ: ಮರೆತು ಎರಡ್ ಸಲ ಸಕ್ಕರಿ ಹಾಕೀನಿ” ಎಂದಳು. “ಮಗಳು ಮಗಳು ಅಂತ ತಲೀ ಮ್ಯಾಲೆ ಕೂಡಿಸಿಕೊಂಡೀರಲ ನಿಮಗ ಹಂಗ ಆಗಬೇಕು” ಎಂದು ಮನೆಯಾಕೆ ಕುಟುಕಿದಳು.
ಮಗಳೇನೋ ಮರೆತು ಸಕ್ಕರಿ ಎರಡು ಸಲ ಹಾಕಿದ್ದಳು, ಆದರೆ ನಮ್ಮ ಹಳ್ಳಿಯ ಚಹಾ ಹೋಟೆಲ್ ಗಳಲ್ಲಿ ಮರೀಲಾರ್ದೆ ಎರಡೆರಡು ಸಲ ಸಕ್ಕರಿ ಹಾಕುವರು.
ನನ್ನ ಅಮ್ಮನಿಗೂ ಸಿಹಿ ಅಂದರೆ ತುಂಬಾ ಪ್ರೀತಿ. ಪ್ರತಿ ಅಡುಗೆಯಲ್ಲೂ ಸ್ವಲ್ಪ ಸಿಹಿ ಮುಂದು. ಸಾರು ಸಹ ಕೆಲವೊಮ್ಮೆ ಎಷ್ಟು ಸಿಹಿಯಾಗಿರುತ್ತಿತ್ತೆಂದರೆ, ನಾನು ಊಟ ಮಾಡುವಾಗ “ಅಮ್ಮಾ, ಅನ್ನದ ಪಾಯಸ ಛೋಲೋ ಆಗೇತಿ” ಎನ್ನುತ್ತಿದ್ದೆ. “ಏ ಎಷ್ಟ್ ಫಸ್ಟ್ ಕ್ಲಾಸ್ ಆಗ್ಯದ, ಸುಳ್ಳ ಹೇಳ್ತೀಯಲ” ಎಂದು ಬೈಯುತ್ತಿದ್ದಳು. ನಾನು ನಗುತ್ತಿದ್ದೆ.
ಅಮ್ಮನಿಗೂ ಚಹಾ ಕುಡಿಯುವ ರೂಢಿ ಇತ್ತು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ತುಂಬಾ ಖುಷಿ. ಅವರ ಹೆಸರಿನಲ್ಲಿ ತಾನೂ ಚಹಾ ಕುಡೀಬಹುದು ಅಂತ. ಅಮ್ಮನ ಚಹಾ ಸಹ ತುಂಬಾ ಸಿಹಿಯಾಗಿರುತ್ತಿತ್ತು. ಹಾಲಿನ ಅಂಶ ಕಡಿಮೆ ಇರುತ್ತಿತ್ತು. ನಾನು “ಅಮ್ಮಾ ಚಾ ಭಾಳ ಸೀ ಆಗೇತಿ” ಎಂದರೆ. ತಾನು ಕುಡಿದು ನೋಡಿ “ಇಲ್ಲಲ ಕರೆಕ್ಟ್ ಆಗೇತಿ” ಎನ್ನುತ್ತಿದ್ದಳು.
83 ವರ್ಷಗಳವರೆಗೆ ಬದುಕಿದ್ದ ಅಮ್ಮನನ್ನು ಕೊನೆಯ ದಿನಗಳಲ್ಲಿ ಎಲ್ಲ ಬಗೆಯ ಚೆಕಪ್ ಮಾಡಿದ ಡಾಕ್ಟರೇ ಗಾಬರಿಯಾಗಿದ್ದರು. “ಏನ್ರೀ ಇವರಿಗೆ ಬಿಪಿ ಇಲ್ಲ, ಶುಗರ್ ಇಲ್ಲ, ಹೆಮೊಗ್ಲೋಬಿನ್ ಪ್ರಮಾಣ ಅತ್ಯಂತ ನಿಖರವಾಗಿದೆ” ಎಂದು ಹೇಳಿದ್ದು ಇಂದಿಗೂ ನೆನಪಿದೆ. ರಿಪೋರ್ಟ್ “ನಾರ್ಮಲ್” ಎಂದೇ ಇತ್ತು.
ಏನೇ ಅನ್ನಿ ನಮ್ಮ ಉತ್ತರ ಕರ್ನಾಟಕದ ಹಳ್ಳಿ ಜನ ಸಕ್ಕರೆ ಜಾಸ್ತಿ ಇರುವ ಚಹಾ ಕುಡಿಯುವುದು ನೋಡಿದರೆ (ದಿನಕ್ಕೆ ಎಷ್ಟು ಸಲವೋ ಲೆಕ್ಕ ಇರುವುದಿಲ್ಲ) ಸಕ್ಕರೆ ಕಾಯಿಲೆಯೇ ಹೆದರಿ ಓಡಿ ಹೋಗಬೇಕು ಆ ರೀತಿ ಇರುತ್ತದೆ.

-ಸಿದ್ಧರಾಮ ಕೂಡ್ಲಿಗಿ
(ಚಹ ಕುಡಿಯುವವರ ಚಿತ್ರ : ಅಂತರ್ಜಾಲದ್ದು)