ಭವಿಷ್ಯ ಸುಳ್ಳು ಮಾಡಿ ಹುಟ್ಟಿದ ಸರದಾರ ಗಂಗಾಧರ ಪತ್ತಾರ

ನನ್ನವ್ವನೊಡಲೊಳಗ ಭ್ರೂಣವಾಗಿದ್ದಾಗ “ಬಹಳ ಗಂಡಾಂತರವು ಈ ಹೆರಿಗಿ ಸಮಯ!” “ಶಿಶು ಸತ್ತು ಹುಟ್ಟುವುದು!!” “ಬಾಣಂತಿ ಸಾಯುವಳು!!!” ಮನೆಯೆ ಬೆಚ್ಚಿತು ಕೇಳಿ ಜೋಯಿಸನ ನುಡಿಯ-೧
ಒಡನೆ ದಾಖಲಿಸಿದರು ತುಂಬು ಗರ್ಭಿಣಿಯನ್ನು ಗದಗ ನಗರದ ಹೆರಿಗೆ ಆಸ್ಪತ್ರೆಯಲ್ಲಿ “ಯಾರು ಭಯಪಡಿಸಿದರೊ!” “ಇಲ್ಲ ಯಾವ ಅಪಾಯ!!” ಎನುತ ನಕ್ಕರು ಡಾಕ್ಟ್ರು ತುಟಿಯಂಚಿನಲ್ಲಿ-೨
ಸಾವಿರದಒಂಬತ್ತು ನೂರಐವತ್ತೊಂದು ಸೆಪ್ಟೆಂಬರದ ನಾಲ್ಕು ಮುಂಜಾವಿನಲ್ಲಿ ಮಲವಿಸರ್ಜನೆ ಬಳಿಕ ಕದ ತೆರೆಯುವಷ್ಟರಲಿ ಅವ್ವ ಹೆತ್ತಳು ನನ್ನ ಕಕ್ಕಸ್ಸಿನಲ್ಲಿ-೩.
ನವಜಾತ ಶಿಶು ದನಿಗೆ ಧಾವಿಸಿದ ಸಿಬ್ಬಂದಿ ಜನತೆ ನಿಬ್ಬೆರಗಾಯ್ತು ನೋಡೀ ವಿಚಿತ್ರ ಓ.ಟಿ.-ಪರಿಕರ-ವೈದ್ಯ-ದಾದಿ-ಸಹಚರ ರಹಿತ ಪ್ರಸವ ವೇದನೆಯಿರದೆ ಇಳೆಗಿಳಿದ ಪುತ್ರ-೪
ನಾಸ್ತಿಕತೆಯೆಡೆ ಒಲಿದೆ ಗೊಡ್ಡು ಕಟ್ಟಳೆ ಮುರಿದೆ ಜಾತಿ ಮತ ಹಳೆ ಸಂಪ್ರದಾಯಗಳ ತೊರೆದೆ ವೈಚಾರಿಕತೆ ಪಥದಿ ಮೌಢ್ಯತೆಯ ಧಿಕ್ಕರಿಸಿ ವೃತ್ತಿ ಜೊತೆ ಸಾಹಿತ್ಯ ಪ್ರವೃತ್ತಿ ಮೆರೆದೆ-೫
ಉಡದಾರ ಕರಿದಾರ ಜನಿವಾರ ಶಿವದಾರ ಯಾವ ದಾರವು ಇರದ ಸರದಾರನಾದೆ ನೂರು ದೇವರು ಮಿಥ್ಯ “ಬುದ್ಧ” “ಬಸವ”ರೆ ಸತ್ಯ “ಪರಮಹಂಸ” “ವಿವೇಕ” ದಿಟ ದೇವರೆಂದೆ-೬
ಅಮವಾಸ್ಯೆ ಹಲ್ಲಿ ನುಡಿ ಅಡ್ಡ ಹಾಯುವ ಬೆಕ್ಕು ಗ್ರಹಣಗಳ ಲೆಕ್ಕಿಸದೆ ಸಾಧಿಸಿದೆ ಗೆಲುವು ಹಣೆ ಬರಹ ಗ್ರಹಚಾರ ಶಕುನ ನಂಬದೆ ನಡೆಯೆ ಕೈಹಿಡಿದ ಕೆಲಸ ಕೈಗೂಡುವುದು ದಿಟವು-೭
ಬಳ್ಳಾರಿ ಮೆಡಿಕಲ್ಲು ಕಾಲೇಜು ನೌಕರಿಗೆ ರಾಹು ಕಾಲದಿ ವರದಿ ಮಾಡಿಕೊಂಡೆ ವರುಷ ಮೂವತ್ತೆರಡು ನಿಸ್ಪೃಹದಿ ಕರ್ತವ್ಯ ನಿರ್ವಹಿಸಿ ಬಾಳಿನಲಿ ಸವಿಬೆಳಕು ಕಂಡೆ-೮.
ನಾನು ಜನಿಸಿದ ಬಳಿಕ ನಾಲ್ಕು ಮಕ್ಕಳ ಹೆತ್ತು ಬದುಕಿದ್ದಳೆನ್ನವ್ವ ತೊಂಬತ್ತು ವರ್ಷ ಸತ್ತು ಹುಟ್ಟಿದ ನನಗೆ ಈಗ ಎಪ್ಪತ್ತೈದು ಬದುಕಿನಲಿ ತುಂಬಿಹುದು ಸುಖ ಶಾಂತಿ ಹರ್ಷ-೯

-ಟಿ.ಕೆ.ಗಂಗಾಧರ ಪತ್ತಾರ,, ಬಳ್ಳಾರಿ
