ಅನುದಿನ ಕವನ-೧೮೩೩, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಳಿಗಾಲ

(…she turns and looks at him, barrier
between them dissolved)

ಚಳಿಗಾಲ…

ಚಳಿಗಾಲದ ಕತ್ತಲು ಬಾಗಿಲ
ಹೊಸ್ತಿಲಾಚೆ
ಸುಮ್ಮನೆ ತಲೆಹಾಕಿ ಮಲಗಿದೆ,
ಖುಷಿಗೊಂದು ಚೌಕಟ್ಟಿನಂತೆ…

ಒಳಗಿದ್ದೇವೆ, ನಮಗೆ
ನಾವೇ ಅಗ್ಗಿಷ್ಟಗೆಗಳಾಗಿ, ಒಬ್ಬರಿಗೊಬ್ಬರು
ಮೈಗಂಟಿಕೊಂಡು.

ರಸ್ತೆಯಲ್ಲಿನ
ಮರಗಳು ಭೂಮಿಗೆ
ಚೂರೇಚೂರು
ಭಾರವಾಗಿಲ್ಲವೇನೋ ಎನ್ನಿಸುವಂತೆ
ತೂಗಾಡುತ್ತಿವೆ…

ಅವಳು ಕನ್ನಡಿಯಲ್ಲಿ ತನ್ನ
ಮುಖ ನೋಡಿಕೊಳ್ಳುತ್ತಿದ್ದರೆ, ಅಗ್ಗಿಷ್ಟಗೆಯ ನಿಗಿನಿಗಿ
ಕೆಂಡದ ಬೆಳಕು
ಅವಳ ಮುಖದ ಮೇಲೆ.

ಮಣಿಕಟ್ಟಿನ –
ತುದಿಗೆ ತೀಡಿದ ಸುಗಂಧದ ಪರಿಮಳ
ಹಬ್ಬುತ್ತಿದೆ ಮೆಲ್ಲಮೆಲ್ಲಗೆ
ರಾತ್ರಿಯ ಜೊತೆಗೆ….

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
—–