ಬಾಗಲಕೋಟೆ, ಜ.7: ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಬಯಲಾಟ ಕಲಾ ಪ್ರಕಾರಗಳಿಗೆ ನೀಡಿರುವ ಅಮೂಲ್ಯವಾದ ಹಾಗೂ ಅನನ್ಯವಾದ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ಹೇಳಿದರು.

ಅವರು ನವನಗರದ ಪತ್ರಿಕಾಭವನದಲ್ಲಿ ಇಂದು(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೌರವ ಪ್ರಶಸ್ತಿ ಪುರಸ್ಕೃತರು: ಬಳ್ಳಾರಿಯ ಕೆ.ಈರಣ್ಣ (ಬಯಲಾಟ) ಕೊಪ್ಪಳದ ಹನಮಂತಪ್ಪ ಪೂಜಾರ (ಸಣ್ಣಾಟ),ಬೆಳಗಾವಿಯ ಕಾಡಪ್ಪಾ ಯಲ್ಲಪ್ಪಾ ಉಪ್ಪಾರ (ಸಣ್ಣಾಟ), ಹಾಸನ ಆರ್.ಬಿ.ಪುಟ್ಟೇಗೌಡ (ಮೂಡಲಪಾಯ), ಬೆಳಗಾವಿಯ ಶ್ರೀಮತಿ ಹೆಗಡೆ (ದೊಡ್ಡಟ) ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಮೈಸೂರಿನ ಎಚ್.ಸಿ.ಶಿವಬುದ್ದಿ (ಸೂತ್ರದ ಗೊಂಬೆ ಯಾಟ), ಮಂಡ್ಯದ ಜಯಪ್ರಕಾಶಗೌಡ (ಮೂಡಲ ಪಾಯ), ವಿಜಯನಗರ ಹೊಳೆಯಾಚೆ ಕೊಟ್ರಪ್ಪ (ಬಯಲಾಟ), ಬಾಗಲಕೋಟೆಯ ಶಿವಾಜಿ ಜಾಧವ (ಬಯಲಾಟ), ಚಿತ್ರದುರ್ಗದ ನಂದಗೋಪಾಲ (ಬಯಲಾಟ), ಧಾರವಾಡ ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ), ಬಳ್ಳಾರಿ ಬಂಡ್ರಿ ಲಿಂಗಪ್ಪ (ಬಯಲಾಟ), ವಿಜಯನಗರ ಚೂಟಿ ಚಿದಾನಂದ (ಬಯಲಾಟ), ದಾವಣಗೆರೆ ಓದೋವೀರಪ್ಪ (ಬಯಲಾಟ) ವಿಜಯಪುರದ ಮಳೆಪ್ಪ ಬಸಪ್ಪ ಬಡಿಗೇರ (ಬಯಲಾಟ) ಹೆಸರನ್ನು ಘೋಷಿಸಿದರು.

ಗೌರವ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000 ಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಶಸ್ತಿ ಪತ್ರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25,000 ಗಳ ನಗದು, ಪ್ರಶಸ್ತಿ ಫಲಕ, ಶಾಲು ಹಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಯಲಾಟ ಸಮಷ್ಠಿ ಪ್ರಧಾನವಾದ ಕಲೆಯಾಗಿದ್ದು, ಜನ ಸಾಮಾನ್ಯರ ಅದರಲ್ಲೂ ರೈತಾಪಿ ಜನಗಳು ಈ ಕಲೆಯನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲಾ ಜಾತಿಗಳ ಮತ ಧರ್ಮದ ಜನರು ಒಂದಾಗಿ ಒಟ್ಟಾಗಿ ಈ ಕಲೆಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಲೆಯು ಪ್ರಾದೇಶಿಕವಾಗಿ ಭಿನ್ನವಾಗಿ ಬೆಳೆದು ಬಂದಿರುವುದರ ಜೊತೆಗೆ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ, ಮತ್ತು ಶ್ರೀಕೃಷ್ಣ ಪಾರಿಜಾತದಂತಹ ಕಲಾಪ್ರಕಾರಗಳಾಗಿಯೂ ಕುಡಿಯೊಡದಿದೆ. ಜೊತೆಗೆ ಪಾರಂಪರಿಕ ಕಲೆಗಳಾದ ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಸೇರಿವೆ ಎಂದರು.
ಅಕಾಡೆಮಿಯು ಈ ಕಲೆಯ ಬೆಳೆವಣಿಗೆಗಾಗಿ ಹಲವುಯೋಜನೆಗಳನ್ನು ಹಾಕಿಕೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಜಾತ್ರೆಗಳ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು ಮಾಡುವ ಬಯಲಾಟ ಪ್ರದರ್ಶನಗಳಿಗೆ ರೂ.25000 ಗಳಿಂದ 35000 ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.. ಜಿಲ್ಲಾವಾರು ಕೇಂದ್ರಗಳಲ್ಲಿ ಬಯಲಾಟ ಉತ್ಸವ, ಸಮ್ಮೇಳ ನಡೆಯುತ್ತದೆ. ತರಬೇತಿ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಬಯಲಾಟ ಕಲೆಯ ಪ್ರಚಾರದ ದೃಷ್ಠಿಯಿಂದ ಹಸ್ತಪ್ರತಿಗಳ ಸಂಗ್ರಹ ಮತ್ತು ಪುಸ್ತಕ ಪ್ರಕಟಣೆ ಮಾಡುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕಿ ಕಸ್ತೂರಿ ಪಾಟೀಲ ಮತ್ತು ಭೀಮಪ್ಪ ಹುದ್ದಾರ ಉಪಸ್ಥಿತರಿದ್ದರು.
——
