ದುರ್ಯೋಧನ
ತಳಮಳದ ಕೊಳ
ಮೊಗ್ಗು ಕಳಚಿ
ನೆಲಕೆ ಬೀಳುವ ಹೊತ್ತು
ಬಾಣನೆಟ್ಟರೂ ಘಾಸಿಗೊಳ್ಳದ ಕಟ್ಟಾಳು ಭೀಷ್ಮರ ಮುದ್ದಿನ ಕೂಸು
ಅಗಲಿದ ಗದೆಯ ಮುಟ್ಟಲಾಗದೆ
ತನ್ನದೇ ಹೆಜ್ಜೆ ಗುರುತಿನ ಮೇಲೆ
ಕುಸಿದು ಬಿದ್ದ ದುರ್ಯೋಧನ !
ಹಾರಿ ತುಂಡು ತುಂಡಾಗಿತ್ತು ಕಿರೀಟ
ಝಾಡಿಸಿ ಒದ್ದಿತ್ತು ಭೀಮ ಪಾದ!
ತತ್ತರಿಸಿ ಬಿದ್ದವನ ಕಣ್ಣು ಪಾಪೆಯಲ್ಲಿ
ಭೀಮ ನಿಲ್ಲಲಿಲ್ಲ!
ಅದು ‘ಕೃಷ್ಣ ಮರುಳು’ ಎಂದಿತು
ನೆಲವ ಬಿಡೆನೆನ್ನುವ ಕೊರಳು!
ಕಂಡ ಕನ್ನಡಿಯೇ ನಿಜವಲ್ಲ
ಬಿಂಬದಗಲಕೂ….
ಗಹಗಹಿಸೋ… ದ್ರೌಪದಿ!
ಕಪ್ಪು ಮಾಯಾಕೇಶ!
ಎದೆ ಪೂರಾ ಕಡೆವ ಮಂಥರ ಪರ್ವತ!
ಹಿಡಿ ಹಿಡಿಯುವ ಸುಡುಗಾಡು
ಕೊಲ್ಲಲೆಂದೇ ನುಗುವ
ಮೀನ ಕಣ್ಣು!
ಅಕ್ಷಯದಲೂ
ಸೇಡು ಬೇಯಿಸುವ ಹೆಣ್ಣು
ಸುಡು ಸುಡುವ
ಅಗ್ನಿ ಕುವರಿ!
‘ನೀಚ ಗಂಡಸರು’
ಎಂದು ಎದೆಗೆ ಒದ್ದಂತೆ
ಘರ್ಜಿಸುವ ಹುಲಿಯ ಬಾಯಿ!
ಛೇ….!
ನಾನ್ಯಾಕೆ?
ಪರಾಕಿನ ಮತಾಪಿಗೆ ಸಿಕ್ಕೆ!?
ತೊಡೆಯ ತೋರಿಸಿ ನಕ್ಕೆ!?
ಉರಿಯುವ ಹಾವಾದೆ!?
ಕಾಲ
ಎಷ್ಟೊಂದು ನಿರ್ಧಯಿ!?
ಮನುಷ್ಯ
ಅದೆಷ್ಟು ನೀಚ!?
ಥೂ…..
ಮಣ್ಣು,
ಮುಗಿಲು …
ಹೂವು,
ಹೊದರಿಗೂ…
ಕಡೆ!
ಬೇಸರಗೊಂಡ
ಧಣಿದ….
ಸುಸ್ತಾದ….
ನೀರಾಚೆಗೂ ಬೆವರಿದ!
ಹುದುಗಲಾರದ ಮರಳಲ್ಲಿ
ನರಳಿ….
ಹೊರಳಿ..
ಪದ
ಪಾದ
ಪದವಿ
ಬಿಟ್ಟು
ನಿಶ್ಯಬ್ದದ
ಬೇರು ಬಿಟ್ಟ!

-ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ
—–
