ಅನುದಿನ ಕವನ-೧೮೩೫, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು

ಅವನು ಸದಾ ಕೊರಗುತ್ತಲೇ ಇದ್ದ
ಕಾರಣ ಕೇಳಿದರೆ ಕಣ್ಣೀರು ಹರಿಸುತ್ತಿದ್ದ
ಅವನ ಮುಖದಲ್ಲಿ ನಗು ಕಂಡ ದಿನ
ಅವನೆದುರಿನ ಖಾಲಿ ಹಾಳೆಗಳು
ಅಕ್ಷರದ ಸಾಲುಗಳಲ್ಲಿ ಕಂಗೊಳಿಸುತ್ತಿದ್ದವು

ಅವನು ಹಪಹಪಿಸಿದ್ದು ಅತ್ತಿದ್ದು
ಬೆವರಿಳಿಸಿದ್ದು ಅನಾಮಧೇಯನಾಗಿದ್ದು
ಅವರ ಮುಖವಾಡವಿಲ್ಲದ ಪ್ರೀತಿಗಾಗಿ
ಕಾಲ ಚಕ್ರ ಉರುಳಿದಂತೆ ಸತ್ಯದ
ಅರಿವಾಗುವುದು ತಡವಾಗುತ್ತಾ ಹೋಯ್ತು

ಹೀಗಾದದ್ದು ಒಳೆಯದೇ ಆಯಿತು
ನಿಜ ಮುಖಗಳ ಪೊರೆ ಬೇಗನೇ
ಕಳಚಿತ್ತೆಂದರೆ ಆ ದಿನವೇ ಅವನ
ಕವಿತೆಗಳು ಸಾಯುತ್ತಿದ್ದವು ಅವನು
ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡ
ಜೋಳಿಗೆ ಹಿಡಿದ ಅನಾಥ ಕವಿಯಾಗುತ್ತಿದ್ದ

ವಿಧಿಯ ಆಟವೇ ಬೇರೆಯಾಗಿತ್ತು
ಜಗತ್ತಿಗವನು ಕವಿಯಾದ,ಪೆನ್ನು
ಹಿಡಿಯದ ಕೈಗಳಿಗೆ ಪುಸ್ತಕಗಳ
ಘಮಲು ತೋರಿಸಿದ, ಮಾತು
ಹೊರಳಲದ ನಾಲಗೆಗಳಿಗೆ ಲೆಕ್ಕ
ಇಡಲಾಗದ ಸಂವಾದವನ್ನು ಕಲಿಸಿದ

ಅವನು ಈಗಿಲ್ಲ ಆದರೆ ಅವನ
ಹಾಡು ಕಥೆ ಕವನಗಳು ತುಂಬಿದ
ಜನರ ಮಧ್ಯೆ ಅಪಾರ ಚಪ್ಪಾಳೆಗಳ
ನಡುವೆ ಅವನನ್ನೇ ಮರೆಸುವಷ್ಟು
ಜನಪ್ರಿಯವಾಗುತ್ತಿವೆ, ಬಹುಶಃ
ಅವನು ನಂಬಿ ಹೆಗಲುಕೊಟ್ಟ
ಜೀವಗಳ ಅಸಲಿಯತ್ತು ಕಾಣದ್ದೆ
ಹೋಗಿದಕ್ಕೆ ಅವನು ಕವಿಯಾಗಿ
ಉಳಿದ ಇಲ್ಲವಾದಲ್ಲಿ ಅವನೂ

ಆಸ್ಪತ್ರೆಯ ಕೊಠಡಿಯಲ್ಲಿ ಕಾಲದ
ಮಿತಿಯಿಲ್ಲದಂತೆ ಹೆಸರರಿಯದ
ಗುಳಿಗೆಗಳನ್ನು ನುಂಗುತ್ತಾ ಜೀವ
ಸವೆಸಬೇಕಾಗಿತ್ತೇನೋ…

-ಸಂಘಮಿತ್ರೆ ನಾಗರಘಟ್ಟ, ಮೈಸೂರು
—–