ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ

ಕೋಲಾರ, ಜ.9: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ  ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ಪ್ರೊ.‌ಬಿ.ಕೆ ರವಿ ಅಧಿಕಾರ ಸ್ವೀಕರಿಸಿದರು.  ಅಧಿಕಾರಿಗಳು, ಸಿಬ್ಬಂದಿಗೆ ಸಂವಿಧಾನ ಪೀಠಿಕೆ ಭೋಧನೆ ಮಾಡುವ ಮೂಲಕ  ಅಧಿಕಾರ ವಹಿಸಿಕೊಳ್ಳುವ ಮೂಲಕ ನೂತನ ಕುಲಪತಿಗಳು ಗಮನಸೆಳೆದರು.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ, ಕುಲಸಚಿವರಾಗಿ (ಆಡಳಿತ) ಕಾರ್ಯನಿರ್ವಹಿಸಿ ಅನುಭವವಿದ್ದ
ಪ್ರೊ. ಬಿ.ಕೆ. ರವಿ ಅವರು ಮಾರ್ಚ್ 2023ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾದ ಏಳು ಹೊಸ ವಿಶ್ವವಿದ್ಯಾಲಯಗಳ ಪೈಕಿ ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ನೇಮಕಗೊಂಡು,  ಮಾರ್ಚ್ 21, 2023ರಂದು ಅಧಿಕಾರ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಅಂದಿನಿಂದ ಕೊಪ್ಪಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಕುಲಸಚಿವ ಶ್ರೀಧರ್, ವಿತ್ತಾಧಿಕಾರಿ ವಸಂತ ಕುಮಾರ್, ಮೌಲ್ಯಮಾಪನ ಕುಲಸಚಿವ ಲೋಕನಾಥ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಶುಭ ಕೋರಿದರು.

—–