ಗಜಲ್
ಇಂದೇಕೋ ಮೌನವೂ ಮೌನವಾಗಿದೆ ಸಾಕಿ
ಮನದ ಅಲೆಯೂ ಸಿಂಪಿಯೊಳಡಗಿದೆ ಸಾಕಿ
ಮಧುಶಾಲೆಯ ತುಂಬ ನೋವಿನ ಬಟ್ಟಲು
ಮಧುವೂ ಕಂಬನಿಯಲಿ ಲೀನವಾಗಿದೆ ಸಾಕಿ
ಕಡಲ ಒಡಲಿನಲಿ ಅದೆಂತಹ ವೇದನೆಯೊ
ತೀರದ ದಾಹದಲಿ ಉಕ್ಕೇರುತಲಿದೆ ಸಾಕಿ
ನೀರವವಾಗಿದೆ ವಸಂತನ ಕೋಗಿಲೆ ಗಾನ
ಮಾಮರದ ಚಿಗುರೆಲ್ಲ ಬಾಡುತಲಿದೆ ಸಾಕಿ
ಅನಂತತೆಗಾಗಿ ಕುದಿಯುತಿದೆ ಸಿದ್ಧನ ಜೀವ
ಕಾರಿರುಳು ದಿನವ ತುಂಡರಿಸುತಲಿದೆ ಸಾಕಿ

-ಸಿದ್ಧರಾಮ ಕೂಡ್ಲಿಗಿ
