the cold wind blow as hard as it would, she said…
ಚಂದ್ರನ ಬೆಳಿಕಿನ ಜೊತೆ
ಶಾಮೀಲಾಗಿ
ಥಳಥಳ ಹೊಳೆಯುತ್ತಿದ್ದ
ಕಡಲ ಅಲೆಗಳಲ್ಲಿ ಪ್ರಶ್ನೆಗಳಿದ್ದವು.
ಮರಳಲ್ಲಿ ಗೂಡು ಕಟ್ಟಿ
ಆಟವಾಡಿ,
ಸಾಕೆನಿಸಿದಾಗ ಆಟಬಿಟ್ಟು ಎದ್ದು-
ಗೂಡು ಕೆಡಿಸಿ ನಡೆದ ಹಾಗೆ,
ಅವಳ ಮನಸ್ಸಿನಿಂದ
ಹೊರನಡೆಯುವುದು
ಎಷ್ಟು ಸರಿ, ಎಂದು ಮತ್ತೆ ಮತ್ತೆ
ಅಲೆಗಳು ಕೇಳುತ್ತಿದ್ದವು.
ಅವನ ಕಪ್ಪು ಕಣ್ಣುಗಳಲ್ಲಿ ಬೆಳಕು
ಆಟವಾಡುತ್ತಿದ್ದರೆ,
ಅವಳು ಮೆಲ್ಲಗೆ
ಅಲ್ಲಿಂದ ಎದ್ದು ನಡೆದಳು.
ದೂರದಲ್ಲಿ ಹುಡುಗಿಯೊಬ್ಬಳು
ಗಿಟಾರ್ ನುಡಿಸುತ್ತಿದ್ದರೆ,
ಹುಡುಗ ಜೋರಾಗಿ
ಹಾಡುವುದು ಕೇಳಿಸುತ್ತಿತ್ತು.
ಎಚ್ಚರದಿಂದ ಬಿಡಿಸಿದ್ದ ಅವಳ
ನೀಲಿ ನಕ್ಷೆಯಲ್ಲಿ
ದಾರಿ ಕಳೆದು ಹೋಗಿರುವುದು ಅವಳ
ಗಮನಕ್ಕೆ ಬಂತು.
ಒಂದು ನೆನಪು ಮತ್ತೊಂದನ್ನು
ಹಿಡಿದು ಅಲ್ಲಾಡಿಸುತ್ತಿತ್ತು.

-ಎಂ.ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು
—–
