ಅನುದಿನ ಕವನ-೧೮೮೦, ಕವಿ: -ಎ.ಎನ್.ರಮೇಶ್.ಗುಬ್ಬಿ., ಕವನದ ಶೀರ್ಷಿಕೆ: ಒಲವೇ ವಿಸ್ಮಯ..!

“ವಿಸ್ಮಯ ಒಲವಿನ ಸವಿ ಸುಂದರ ಕವಿತೆ. ಅದ್ಭುತ ಅನುರಾಗದ ಮಧು ಮಧುರ ಭಾವಗೀತೆ. ಆಳಕ್ಕಿಳಿದಷ್ಟೂ ಪ್ರೇಮದ ಜೀವಸಂವೇದನೆಗಳ ಸಾರವಿದೆ. ಆಸ್ವಾಧಿಸಿದಷ್ಟೂ ಪ್ರೀತಿಯ ಭಾವಾರಾಧನೆಗಳ ವಿಸ್ತಾರವಿದೆ. ಒಲವೆಂದರೆ ಹೀಗೆ ಯುಗ-ಯುಗದ ವಿಸ್ಮಯವೂ ಹೌದು. ಜೀವ-ಭಾವಗಳ ಅತಿಶಯವೂ ಹೌದು. ಬರೆದಷ್ಟೂ ಬಣ್ಣಗಳ ನಿತ್ಯ ನಾವಿನ್ಯವೂ ಹೌದು. ಏನಂತೀರಾ..?”

– ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಒಲವೇ ವಿಸ್ಮಯ..!

ಮಾತನಾಡಿಸಲೆಂದು ಬಂದೆ
ಮೌನದೆದುರು ಮಾತು ಮರೆತು
ಮರುಳಾಗಿ ಮೈಮರೆತು ನಿಂದೆ.!

ಗೆದ್ದು ಬೀಗಬೇಕೆಂದುಕೊಂಡೆ
ಹೂನಗೆಯೆದುರು ನನಗರಿವಿಲ್ಲದೆ
ಬಾಗುತ ಸೋಲೊಪ್ಪಿಕೊಂಡೆ.!

ಕಥೆಗಳ ಹೇಳಬೇಕೆಂದು ಬಂದೆ
ಕವಿತೆಯೆದುರು ಕಣ್ಣುಮಿಟುಕಿಸದೆ
ಕಿವಿಯಾಗಿ ಕವಿಯಾಗಿ ಹೋದೆ.!

ಕೀಟಲೆ ಮಾಡಬೇಕೆಂದುಕೊಂಡೆ
ಕಕ್ಕುಲತೆಯೆದುರು ಕರಗಿ ನೀರಾಗಿ
ಕಣಕಣದಿ ಕಾಮನಬಿಲ್ಲು ಕಂಡೆ.!

ಪ್ರೇಮದ ಪಟ್ಟು ಹಾಕಲು ಬಂದೆ
ಪ್ರೀತಿಯೆದುರು ನಾ ಪರವಶನಾಗಿ
ಶಬ್ಧಗಳೆ ಇಲ್ಲದೆ ಶರಣಾಗತನಾದೆ.!

ಚಿತ್ರವನು ಬಿಡಿಸಬೇಕೆಂದುಕೊಂಡೆ
ಚಂದ್ರಿಕೆಯೆದುರು ಚಿತ್ತಚಿತ್ತಾರವಾಗಿ
ಕುಂಚವೆ ಕಳೆದುಹೋದದ್ದ ಕಂಡೆ.!

ಒಲವ ನಿವೇದಿಸಿ ಒಲೈಸ ಬಂದೆ
ಒಲುಮೆ ಒಡಲೆದುರು ಆರ್ದ್ರನಾಗಿ
ಆರಾಧಿಸುತ ನನ್ನೆ ಅರ್ಪಿಸಿ ನಿಂದೆ.!

ಬಿಗಿದು ಬಂಧಿಸಬೇಕೆಂದುಕೊಂಡೆ
ಜೀವ ಭಾವ ಬೆಸೆದು ಬಂಧಿತನಾಗಿ
ಅವಿನಾಭಾವ ಬೆರೆತು ಐಕ್ಯಗೊಂಡೆ.!

-ಎ.ಎನ್.ರಮೇಶ್.ಗುಬ್ಬಿ.

Leave a Reply

Your email address will not be published. Required fields are marked *