ಅನುದಿನ ಕವನ-೧೯೧೮, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ ಲಹರಿ

“ಕವಿತೆಯ ಸೌಂದರ್ಯ ಮಾಧುರ್ಯ ಬಿಂಬಿಸುವ ಕಾವ್ಯಲಹರಿ. ಕವಿತೆಯ ಆಂತರ್ಯ ಔದಾರ್ಯ ಸ್ಫುರಿಸುವ ಭಾವಝರಿ. ಇದು ಪ್ರತಿ ಕವಿಯೆದೆಯ ಸತ್ಯ ಭಾಷ್ಯವೂ ಹೌದು. ಓದುವ ಹೃದಯಗಳ ನಿತ್ಯ ಆಶಯವೂ ಹೌದು. ಕವಿತೆಯ ಸ್ವರಗಾಂಭೀರ್ಯ ಸುರಚಾತುರ್ಯ ಧ್ವನಿಸುವ ಜೀವಬಾಸುರಿಯೂ ಹೌದು. ಏನಂತೀರಾ..?”                                        -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಕಾವ್ಯಲಹರಿ..!

ಭಾವದ ಕುಲುಮೆಯಲ್ಲಿ
ಪದಗಳು ಹೊರಳಿ
ನರಳಿ ಅರಳಬೇಕು
ಸುಂದರ ಸುಮಧುರ
ಅಪೂರ್ವ ಕವಿತೆಗಳಾಗಿ
ಮಿನುಗಿ ಹೊಳೆಯಬೇಕು.!

ಅರಿವಿನ ಒಲುಮೆಯಲ್ಲಿ
ಶಬ್ಧಗಳು ಬಾಗಿ
ಮಾಗಿ ಬೀಗಬೇಕು
ಜ್ವಲಿಸಿ ಪ್ರಜ್ವಲಿಸಿ
ಅಕ್ಷರ ಪ್ರಣತೆಗಳಾಗಿ
ಬೆಳಗುತ್ತ ಬೆಳಕಾಗಬೇಕು.!

ಅನುಭವದ ಚಿಲುಮೆಯಲ್ಲಿ
ಚಿಂತನೆಗಳು ಮಿಂದು
ನೆನೆದು ಶುಭ್ರವಾಗಬೇಕು.
ನಿರ್ಮಲ ನಿಷ್ಕಲ್ಮಶ
ಚೈತನ್ಯದ ಒರತೆಗಳಾಗಿ
ಹರಿದು ಹಸಿರಾಗಬೇಕು.!

ಸತ್ಯಗಳ ನಿಲುಮೆಯಲ್ಲಿ
ತತ್ವಗಳು ಸಾತ್ವಿಕವಾಗಿ
ತಾತ್ವಿಕವಾಗಿ ದೃಢವಾಗಬೇಕು..
ದಿಟ್ಟವಾಗಿ ದಟ್ಟವಾಗಿ
ಸತ್ವಯುತ ಸಮತೆಗಳಾಗಿ
ಸ್ಫುರಿದು ಸಾಕಾರವಾಗಬೇಕು.!

ಜೀವದ ನಲುಮೆಯಲ್ಲಿ
ಸ್ವರಗಳು ಸುಸ್ವರಗಳಾಗಿ
ನಾದವಾಗಿ ನಿನಾದವಾಗಬೇಕು..
ಹೃದ್ಯವಾಗಿ ಪದ್ಯವಾಗಿ
ಮಧುಮಧುರ ಗೀತೆಗಳಾಗಿ
ಮಾರ್ದನಿಸಿ ಝೇಂಕಾರವಾಗಬೇಕು.!


-ಎ.ಎನ್.ರಮೇಶ್. ಗುಬ್ಬಿ.

Leave a Reply

Your email address will not be published. Required fields are marked *